ADVERTISEMENT

ಸಾವನ್ನು ಕಣ್ಣಾರೆ ಕಂಡೆ.. ಭಯಾನಕ ಸ್ಫೋಟದಲ್ಲಿ ಬದುಕುಳಿದ ಪ್ರತಾಪ್ ಮಾತು

ಪಿಟಿಐ
Published 11 ನವೆಂಬರ್ 2025, 10:17 IST
Last Updated 11 ನವೆಂಬರ್ 2025, 10:17 IST
<div class="paragraphs"><p>ದೆಹಲಿ ಕೆಂಪು ಕೋಟೆಯ ಮೆಟ್ರೊ ನಿಲ್ದಾಣದ ಬಳಿ ಕಾರುಗಳು ಭಾರಿ ಸ್ಪೋಟ</p></div>

ದೆಹಲಿ ಕೆಂಪು ಕೋಟೆಯ ಮೆಟ್ರೊ ನಿಲ್ದಾಣದ ಬಳಿ ಕಾರುಗಳು ಭಾರಿ ಸ್ಪೋಟ

   

ನವದೆಹಲಿ: 'ಜನರು ರಸ್ತೆ ಮೇಲೆ ರಕ್ತಸಿಕ್ತವಾಗಿ ಬಿದ್ದಿದ್ದರು. ಕೆಲವರು ಉಸಿರಾಡುತ್ತಿದ್ದರು, ಇನ್ನೂ ಕೆಲವರು ಉಸಿರು ನಿಲ್ಲಿಸಿದ್ದರು.. ದೆಹಲಿಯ ಕೆಂಪು ಕೋಟೆ ಬಳಿ ಸಾಮಾನ್ಯ ಸಂಜೆ ಹೇಗೆ ಭಯಾನಕವಾಗಿ ಮಾರ್ಪಟ್ಟಿತ್ತು ಎಂದು ಸ್ಫೋಟದಲ್ಲಿ ಗಾಯಗೊಂಡ ರಾಮ್ ಪ್ರತಾಪ್ ವಿವರಿಸಿದರು.

ಕೆಂಪು ಕೋಟೆಯ ಬಳಿ ಸಣ್ಣ ಉಪಾಹಾರ ಅಂಗಡಿಯನ್ನು ಪ್ರತಾಪ್‌ ನಡೆಸುತ್ತಿದ್ದರು. ಸೋಮವಾರ ಸಂಜೆ ಅಂಗಡಿಯನ್ನು ಮುಚ್ಚುವ ವೇಳೆಗೆ ಈ ಭಯಾನಕ ಸದ್ದು ಕಿವಿಗೆ ಅಪ್ಪಳಿಸಿತ್ತು. ಶಾಂತವಾಗಿದ್ದ ವಾತಾವಾರಣ ಏಕಾಏಕಿ ದುಃಸ್ವಪ್ನದಂತೆ ಗೋಚರವಾಯಿತು ಎಂದು ಘಟನೆ ಬಗ್ಗೆ ಅವರು ನೆನಪಿಸಿಕೊಂಡರು.

ADVERTISEMENT

ನಿನ್ನೆ ಸಾಮಾನ್ಯ ಸಂಜೆಯಾಗಿತ್ತು. ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ನನಗೆ ಕೆಲವು ಸೆಕೆಂಡುಗಳ ಕಾಲ ಏನೂ ಕೇಳಿಸಲಿಲ್ಲ. ಗಾಜಿನ ಚೂರುಗಳು ನಮ್ಮ ಮೇಲೆ ಬಿದ್ದವು ಮತ್ತು ದಟ್ಟವಾದ ಹೊಗೆ ಎಲ್ಲವನ್ನೂ ಆವರಿಸಿತು ಎಂದು ಪ್ರತಾಪ್ ತಿಳಿಸಿದ್ದಾರೆ.

ಜನರು ಚೆಲ್ಲಾಪಿಲ್ಲಿಯಾಗಿ ರಸ್ತೆ ಮೇಲೆ ಬಿದ್ದಿದ್ದರು. ನನ್ನ ಕೈಯಲ್ಲಿ ರಕ್ತ ಹರಿಯುತ್ತಿತ್ತು. ಆದರೆ ಆ ಕ್ಷಣಕ್ಕೆ ನನಗೆ ಅರಿವಾಗಲಿಲ್ಲ. ಸಾವನ್ನು ಹತ್ತಿರದಿಂದ ನೋಡಿದ್ದೇನೆ ಎಂದು ಕಣ್ಣೀರು ಹಾಕುತ್ತ ಪ್ರತಾಪ್‌ ಘಟನೆಯ ಭೀಕರತೆಯನ್ನು ತೆರೆದಿಟ್ಟಿದ್ದಾರೆ.

ಸ್ಫೋಟ ಸಂಭವಿಸಿದ ವೇಳೆ ಜನರು ತಮ್ಮ ಕುಟುಂಬದ ವ್ಯಕ್ತಿಗಳ ಹೆಸರುಗಳನ್ನು ಕೂಗುತ್ತಿದ್ದರು, ಅಳುತ್ತಿದ್ದರು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕೆಲವು ಸಮಯ ಯಾರು ಜೀವಂತವಾಗಿದ್ದಾರೆಂದು ಯಾರಿಗೂ ತಿಳಿದಿರಲಿಲ್ಲ ಎಂದು ಪ್ರತಾಪ್‌ ಹೇಳಿದ್ದಾರೆ.

ಸ್ಫೋಟದ ಶಬ್ದದಿಂದ ನಾನು ನೆಲಕ್ಕೆ ಉರುಳಿದೆ. ನಾನು ಎದ್ದು ನೋಡಿದಾಗ ನನ್ನ ಬಟ್ಟೆಗಳು ರಕ್ತದಲ್ಲಿ ತೊಯ್ದಿದ್ದವು. ರಸ್ತೆಯಲ್ಲಿ ಶವಗಳು, ಗಾಜಿನ ಮತ್ತು ದೇಹದ ತುಂಡುಗಳು ಎಲ್ಲೆಡೆ ಬಿದ್ದಿದ್ದನ್ನು ನಾನು ನೋಡಿದೆ. ಒಂದು ಕ್ಷಣ ನನ್ನ ಕುಟುಂಬದವರನ್ನೂ ಇನ್ನೆಂದೂ ನೋಡುವುದಿಲ್ಲವೇನೊ ಅಂದುಕೊಂಡೆ ಎಂದು ಪ್ರತಾಪ್‌ ತಿಳಿಸಿದ್ದಾರೆ.

ಸದಾ ಜನದಟ್ಟಣೆಯಿಂದ ಕೂಡಿರುವ ಐತಿಹಾಸಿಕ ಕೆಂಪುಕೋಟೆಯ ಬಳಿ ಸಂಚಾರ ಸಿಗ್ನಲ್‌ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಸೋಮವಾರ ಸಂಜೆ ಭಾರಿ ಸ್ಫೋಟ ಸಂಭವಿಸಿ 12 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.