ADVERTISEMENT

ದೆಹಲಿ ಬಸ್‌ ಖರೀದಿ ಹಗರಣ ಸಿಬಿಐ ತನಿಖೆಗೆ: ಸರ್ಕಾರ– ಸಕ್ಸೇನಾ ನಡುವೆ ಸಂಘರ್ಷ

ಪಿಟಿಐ
Published 11 ಸೆಪ್ಟೆಂಬರ್ 2022, 17:58 IST
Last Updated 11 ಸೆಪ್ಟೆಂಬರ್ 2022, 17:58 IST
ಸಿಬಿಐ
ಸಿಬಿಐ   

ನವದೆಹಲಿ: ದೆಹಲಿ ಸಾರಿಗೆ ನಿಗಮಕ್ಕೆ (ಡಿಟಿಸಿ) ಒಂದು ಸಾವಿರ ಬಸ್‌ಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ದೂರನ್ನು ತನಿಖೆಗಾಗಿ ಸಿಬಿಐಗೆ ವರ್ಗಾಯಿಸಲು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ (ಎಲ್‌.ಜಿ) ವಿ.ಕೆ. ಸಕ್ಸೇನಾ ಅವರು ಒಪ್ಪಿಗೆ ಕೊಟ್ಟಿದ್ದಾರೆ.

ಈ ಕುರಿತ ದೂರು ಇದೇ ಜೂನ್‌ನಲ್ಲಿ ಸಕ್ಸೇನಾ ಅವರಿಗೆ ಸಲ್ಲಿಕೆಯಾಗಿತ್ತು. ಡಿಟಿಸಿಗೆ ಬಸ್‌ ಖರೀದಿಗೆ ಟೆಂಡರ್‌ ಮತ್ತು ಖರೀದಿ ಸಮಿತಿಯ ಅಧ್ಯಕ್ಷರಾಗಿ ಸಾರಿಗೆ ಸಚಿವರನ್ನು ನೇಮಕ ಮಾಡಲಾಗಿದೆ ಎಂಬ ವಿಚಾರಕ್ಕೆ ದೂರಿನಲ್ಲಿ ಒತ್ತು ಕೊಡಲಾಗಿದೆ. ಡಿಐಎಂಟಿಎಸ್‌ಯನ್ನು (ದೆಹಲಿ ಬಹುವಿಧಾನ ಸಾರಿಗೆ ವ್ಯವಸ್ಥೆ) ಟೆಂಡರ್‌ ಪ್ರಕ್ರಿಯೆಯ ಸಮಾಲೋಚನಾ ಸಂಸ್ಥೆಯನ್ನಾಗಿ ನೇಮಕ ಮಾಡಿರುವ ಉದ್ದೇಶವೇ ಅಕ್ರಮ ನಡೆಸುವು
ದಾಗಿತ್ತು ಎಂದೂ ದೂರಿನಲ್ಲಿ ಹೇಳಲಾಗಿದೆ.

2019ರ ಜುಲೈನಲ್ಲಿ ಸಾವಿರ ಬಸ್‌ಗಳನ್ನು ಖರೀದಿಸಲಾಗಿತ್ತು. ಬಸ್‌ಗಳ ನಿರ್ವಹಣೆಗಾಗಿ 2020ರಲ್ಲಿ ಮಾರ್ಚ್‌ನಲ್ಲಿ ಮತ್ತೊಂದು ಕರಾರನ್ನು ಮಾಡಿಕೊಳ್ಳಲಾಗಿತ್ತು. ದೆಹಲಿ ಸರ್ಕಾರದ ಇಲಾಖೆಗಳ ಪ್ರತಿಕ್ರಿಯೆ ಮತ್ತು ಶಿಫಾರಸುಗಳಿಗಾಗಿ ಈ ದೂರನ್ನು ಮುಖ್ಯ ಕಾರ್ಯದರ್ಶಿಗೆ ಜುಲೈ 22ರಂದು
ಸಲ್ಲಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ADVERTISEMENT

ಬಸ್ ಖರೀದಿ ಮತ್ತು ನಿರ್ವಹಣೆ ಗುತ್ತಿಗೆಯಲ್ಲಿ ಕೆಲವು ಅವ್ಯವಹಾರ ನಡೆದಿದೆ ಎಂದು ಮುಖ್ಯ ಕಾರ್ಯ
ದರ್ಶಿಯವರು ಆಗಸ್ಟ್‌ 19ರಂದು ವರದಿ ನೀಡಿದ್ದರು. ಅದರ ಬಳಿಕ, ದೂರನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಸಿಬಿಐ ಪ್ರಾಥಮಿಕ ಹಂತದ ತನಿಖೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಬಸ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಪರಿಶೀಲನೆ ನಡೆಸಲು ನಿವೃತ್ತ ಐಎಎಸ್‌ ಅಧಿಕಾರಿ ಒ.ಪಿ. ಅಗರ್‌ವಾಲ್‌ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಆಗಸ್ಟ್‌ನಲ್ಲಿ ಈ ಸಮಿತಿಯು ವರದಿ ಕೊಟ್ಟಿತ್ತು. ‘ಟೆಂಡರ್ ಮತ್ತು ಖರೀದಿಯಲ್ಲಿ ಪ್ರಕ್ರಿಯೆಗಳ ಉಲ್ಲಂಘನೆ ಆಗಿದೆ’ ಎಂದು ಈ ವರದಿಯಲ್ಲಿ ಹೇಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಗಮನ ಬೇರೆಡೆ ಸೆಳೆಯುವ ತಂತ್ರ: ಎಎಪಿ

ಲೆಫ್ಟಿನೆಂಟ್ ಗವರ್ನರ್‌ ವಿ.ಕೆ. ಸಕ್ಸೇನಾ ಅವರ ಮೇಲೆ ಕೇಳಿ ಬಂದಿರುವ ಆರೋಪಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಅವರು ಬಸ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ಸಿಬಿಐ ತನಿಖೆಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಎಎಪಿ ಹೇಳಿದೆ.

ಸಿಬಿಐ ಅಥವಾ ಇನ್ನಾವುದೇ ಸಂಸ್ಥೆಯಿಂದ ತನಿಖೆ ನಡೆಸುವುದಕ್ಕೆ ವಿರೋಧ ಇಲ್ಲ ಎಂದೂ ಎಎಪಿ ತಿಳಿಸಿದೆ.

ಪ್ರಕರಣದ ಬಗ್ಗೆ ತನಿಖೆ ಆರಂಭವಾದ ಕೂಡಲೇ ಬಸ್ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಎರಡು ವರ್ಷದಿಂದ ಇದು ಹೀಗೆಯೇ ಇದೆ ಎಂದು ಎಎಪಿ ಹೇಳಿದೆ.

ಕೇಜ್ರಿವಾಲ್‌ ಭ್ರಷ್ಟ: ಬಿಜೆಪಿ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಭ್ರಷ್ಟಾಚಾರ ಒಂದೇ ಅರ್ಥದ ಪದಗಳಾಗಿವೆ ಎಂದು ಬಿಜೆಪಿ ಭಾನುವಾರ ಹೇಳಿದೆ.

ದೆಹಲಿ ಸರ್ಕಾರದ ಪ್ರತಿಯೊಂದು ಇಲಾಖೆಯೂ ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗಿವೆ. ಕೇಜ್ರಿವಾಲ್‌ ಅವರ ಗೆಳೆಯರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಟೆಂಡರ್ ಮತ್ತು ಗುತ್ತಿಗೆಗಳನ್ನು ರೂಪಿಸಲಾಗಿದೆ ಎಂದು ಬಿಜೆಪಿ ವಕ್ತಾರ ಗೌರವ ಭಾಟಿಯಾ ಆರೋಪಿಸಿದ್ದಾರೆ. ‘ನೀವು ಅತ್ಯಂತ ಪ್ರಾಮಾಣಿಕ ಎಂದು ಹೇಗೆ ಹೇಳಿಕೊಳ್ಳುವಿರಿ? ನೀವು ಭ್ರಷ್ಟ ಎಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದುವರಿಯಲು ನಿಮಗೆ ಯಾವುದೇ ಹಕ್ಕು ಇಲ್ಲ’ ಎಂದು ಭಾಟಿಯಾ ಅವರು ಕೇಜ್ರಿವಾಲ್‌ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.