ಮುಖ್ಯಮಂತ್ರಿ ರೇಖಾ ಗುಪ್ತಾ
ನವದೆಹಲಿ: ರಾಷ್ಟ್ರ ರಾಜಧಾನಿಯ ಎಲ್ಲ ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಯಂತ್ರಿಸುವ ಮಸೂದೆಗೆ ದೆಹಲಿ ಸರ್ಕಾರದ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.
ಇದರಿಂದ ಪ್ರತಿ ವರ್ಷವು ಶುಲ್ಕವನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡುತ್ತಿದ್ದ ಸಮಸ್ಯೆ ಬಗ್ಗೆ ದನಿ ಎತ್ತಿದ್ದ ಪೋಷಕರಿಗೆ ದೊಡ್ಡ ಪರಿಹಾರ ಸಿಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ‘ಈ ಮಸೂದೆಯಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸದ ಶಾಲೆಗಳು ₹1 ಲಕ್ಷದಿಂದ ₹10 ಲಕ್ಷದವರೆಗೆ ಕಠಿಣ ದಂಡ ತೆರಬೇಕಾಗುತ್ತದೆ’ ಎಂದು ಹೇಳಿದರು.
ಇದು ತಮ್ಮ ಸರ್ಕಾರದ ದಿಟ್ಟ ಮತ್ತು ಐತಿಹಾಸಿಕ ಕ್ರಮವೆಂದು ಬಣ್ಣಿಸಿರುವ ರೇಖಾ ಗುಪ್ತಾ, ‘ದೆಹಲಿ ಶಾಲಾ ಶಿಕ್ಷಣ ಪಾರದರ್ಶಕತೆ ಮಸೂದೆ 2025’ ಅನ್ನು ಅಂಗೀಕರಿಸಲು ವಿಧಾನಸಭೆಯ ತುರ್ತು ಅಧಿವೇಶನ ಕರೆಯಲಾಗುವುದು ಎಂದು ಹೇಳಿದರು.
‘ಕೆಲವು ಶಾಲೆಗಳು ಚಟುವಟಿಕೆಗಳು ಮತ್ತು ಶುಲ್ಕ ಹೆಚ್ಚಳದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ದೂರುಗಳಿಂದಾಗಿ ಪೋಷಕರಲ್ಲಿ ಭೀತಿ ಉಂಟಾಗಿತ್ತು. ಹಿಂದಿನ ಸರ್ಕಾರಗಳು ಶುಲ್ಕ ಹೆಚ್ಚಳ ತಡೆಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ ತಡೆಗೆ ಸರ್ಕಾರಕ್ಕೆ ನೆರವಾಗುವ ಯಾವುದೇ ಮಾರ್ಗಸೂಚಿಗಳೂ ಇರಲಿಲ್ಲ’ ಎಂದು ಅವರು ಹೇಳಿದರು.
ಶಿಕ್ಷಣ ಸಚಿವ ಆಶಿಶ್ ಸೂದ್, ಶಾಲಾ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮೂರು ಹಂತದ ಸಮಿತಿಗಳನ್ನು ರಚಿಸಲು ಮಸೂದೆಯಲ್ಲಿ ಅವಕಾಶ ಇರಲಿದೆ. ಇದರಿಂದ ಶಾಲಾ ಶುಲ್ಕ ನಿರ್ಧರಿಸುವ ಪ್ರಕ್ರಿಯೆಗೆ ಅಗತ್ಯವಾದ ಪಾರದರ್ಶಕತೆ ಬರಲಿದೆ. ಅನಿಯಂತ್ರಿತ ಶುಲ್ಕ ಏರಿಕೆ ಸಮಸ್ಯೆಯಿಂದಲೂ ಪೋಷಕರಿಗೆ ರಕ್ಷಣೆ ಸಿಗಲಿದೆ. ಇಡೀ ಪ್ರಕ್ರಿಯೆಯು ಕಾಲಮಿತಿಯೊಳಗೆ ನಡೆಯಲಿದ್ದು, ಪೋಷಕರು ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.