ADVERTISEMENT

ದೆಹಲಿ: ವಾಹನಗಳಿಗೆ ರಾಸಾಯನಿಕ ಸಿಂಪರಣೆ

ಕರೊನಾ ಹರಡದಂತೆ ಮುನ್ನೆಚ್ಚರಿಕೆ.. ಸಾರ್ವಜನಿಕ ಆರೋಗ್ಯ ರಕ್ಷಣೆ...

ಸಿದ್ದಯ್ಯ ಹಿರೇಮಠ
Published 21 ಮಾರ್ಚ್ 2020, 20:14 IST
Last Updated 21 ಮಾರ್ಚ್ 2020, 20:14 IST
ದೆಹಲಿಯ ಸರೋಜಿನಿ ನಗರದ ಬಳಿ ಇರುವ ದೆಹಲಿ ಸಾರಿಗೆ ಸಂಸ್ಥೆಯ ಬಸ್‌ ಘಟಕದ ಎದುರು ಆಟೊ ರಿಕ್ಷಾಗಳಿಗೆ ರಾಸಾಯನಿಕ ಸಿಂಪರಣೆ ಮಾಡುತ್ತಿರುವ ಸಿಬ್ಬಂದಿ
ದೆಹಲಿಯ ಸರೋಜಿನಿ ನಗರದ ಬಳಿ ಇರುವ ದೆಹಲಿ ಸಾರಿಗೆ ಸಂಸ್ಥೆಯ ಬಸ್‌ ಘಟಕದ ಎದುರು ಆಟೊ ರಿಕ್ಷಾಗಳಿಗೆ ರಾಸಾಯನಿಕ ಸಿಂಪರಣೆ ಮಾಡುತ್ತಿರುವ ಸಿಬ್ಬಂದಿ   

ನವದೆಹಲಿ: ಸಂಚಾರಕ್ಕಾಗಿ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿರುವ ಜನರನ್ನು ಕೊರೊನಾ ವೈರಸ್‌ನಿಂದ ರಕ್ಷಿಸಿ, ಅವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ವಿಶಿಷ್ಟ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ ಓಲಾ, ಉಬರ್ ಸೇರಿದಂತೆ ಎಲ್ಲ ರೀತಿಯ ಆಟೊ, ಟ್ಯಾಕ್ಸಿ ಮತ್ತು ಸಾರಿಗೆ ಸಂಸ್ಥೆ ಬಸ್‌ಗಳಿಗೆ ರಾಸಾಯನಿಕ ಸಿಂಪಡಿಸುವ ಮೂಲಕ ಕರೊನಾ ವೈರಸ್‌ ಹರಡದಂತೆ ತಡೆಯಲು ದೆಹಲಿ ಸಾರಿಗೆ ನಿಗಮದಿಂದಲೇ ಕ್ರಮ ಕೈಗೊಳ್ಳಲಾಗಿದೆ.

ನಗರದ ವಿವಿಧೆಡೆ ಇರುವ ಸಾರಿಗೆ ಸಂಸ್ಥೆಯ ಬಸ್‌ ಘಟಕಗಳ ಎದುರು ನಿತ್ಯವೂ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕ ಸೇವೆ ಒದಗಿಸುವ ವಾಹನಗಳಿಗೆ ಉಚಿತವಾಗಿ ರಾಸಾಯನಿಕ ಸಿಂಪಡಿಸಿ ಒಂದು ರಸೀದಿ ನೀಡಲಾಗುತ್ತಿದೆ. ತಪಾಸಣೆ ನಡೆಸುವ ಪೊಲೀಸರಿಗೆ ಚಾಲಕರು ಈ ರಸೀದಿ ತೋರಿಸುವುದು ಕಡ್ಡಾಯ. ಒಂದೊಮ್ಮೆ ರಸೀದಿ ಇಲ್ಲದಿದ್ದರೆ ರಾಸಾಯನಿಕ ಸಿಂಪರಣೆ ಮಾಡಿಸಿಲ್ಲ ಎಂಬುದು ಖಾತರಿಯಾಗಲಿದೆ.

ADVERTISEMENT

‘ಈ ರಾಸಾಯನಿಕವು 24 ಗಂಟೆಗಳವರೆಗೆ ವೈರಸ್‌ ಹರಡದಂತೆ ಕಾರ್ಯ ನಿರ್ವಹಿಸುತ್ತದೆ. ಬಾಡಿಗೆ ವಾಹನಗಳಿಗೆ ಆಯಾ ಚಾಲಕರು ನಿತ್ಯವೂ ಬೆಳಿಗ್ಗೆ ರಾಸಾಯನಿಕ ಸಿಂಪಡಣೆ ಮಾಡಿಸಿಕೊಂಡೇ ಕೆಲಸ ಆರಂಭಿಸುವಂತೆ ಸೂಚಿಸಲಾಗಿದೆ’ ಎಂದು ಇಲ್ಲಿನ ಸರೋಜಿನಿ ನಗರದಲ್ಲಿರುವ ದೆಹಲಿ ಸಾರಿಗೆ ಸಂಸ್ಥೆಯ ಬಸ್‌ ಘಟಕದ ಎದುರು ರಾಸಾಯನಿಕ ಸಿಂಪರಣೆ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿ ಧನಪಾಲ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕರ ಆರೋಗ್ಯ ರಕ್ಷಣೆ ಎಲ್ಲರ ಹೊಣೆ. ಹಾಗಾಗಿ ಪ್ರತಿಯೊಬ್ಬರೂ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಅನಿವಾರ್ಯ ಇದ್ದವರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುತ್ತಾರೆ. ಅವರ ಆರೋಗ್ಯದ ಹಿತದೃಷ್ಟಿಯಿಂದ ಈ ಸೌಲಭ್ಯ ಒದಗಿಸಲಾಗುತ್ತಿದೆ. ಬಹುತೇಕ ವಾಹನ ಚಾಲಕರು ಪಾಲಿಸುತ್ತಿದ್ದಾರೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.