ADVERTISEMENT

Bihar Train Accident | ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಕೇಜ್ರಿವಾಲ್

ಪಿಟಿಐ
Published 12 ಅಕ್ಟೋಬರ್ 2023, 9:43 IST
Last Updated 12 ಅಕ್ಟೋಬರ್ 2023, 9:43 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಬಿಹಾರದ ಬಕ್ಸರ್‌ ಜಿಲ್ಲೆಯಲ್ಲಿ ಸಂಭವಿಸಿದ ರೈಲು ದುರಂತದ ಬಗ್ಗೆ ಮರುಕ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇಂತಹ ಅವಘಡಗಳ ತಡೆಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬಕ್ಸರ್‌ ಜಿಲ್ಲೆಯ ರಘುನಾಥ್‌ಪುರ ನಿಲ್ದಾಣದ ಬಳಿ ಆನಂದ್‌ ವಿಹಾರ್‌–ಕಾಮಾಕ್ಯ ನಾರ್ತ್‌ ಈಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳು ಬುಧವಾರ ರಾತ್ರಿ ಹಳಿ ತಪ್ಪಿವೆ. ಪರಿಣಾಮವಾಗಿ ರೈಲಿನಲ್ಲಿದ್ದ ಹಲವರು ಗಾಯಗೊಂಡು, ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕೇಜ್ರಿವಾಲ್, 'ಬಿಹಾರದ ಬಕ್ಸರ್‌ನಲ್ಲಿ ರೈಲು ದುರಂತ ಸಂಭವಿಸಿರುವುದು ಅತ್ಯಂತ ದುಃಖಕರ. ಅವಘಡದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

ADVERTISEMENT

'ಇಂತಹ ದುರಂತಗಳು ಮತ್ತೆಮತ್ತೆ ಘಟಿಸುತ್ತಿರುವುದು ಕಳವಳಕಾರಿ. ಇವು ಮರುಕಳಿಸದಂತೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.

ಬಾಲೇಶ್ವರ ರೈಲು ದುರಂತ
ಇದೇ ವರ್ಷ ಜೂನ್‌ 2ರಂದು ರಾತ್ರಿ 7 ಗಂಟೆ ಹೊತ್ತಿಗೆ ಒಡಿಶಾದ ಬಾಲೇಶ್ವರದ ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಸರಣಿ ಅಪಘಾತ ಸಂಭವಿಸಿತ್ತು.

ದುರಂತದಲ್ಲಿ 297 ಮಂದಿ ಸಾವಿಗೀಡಾಗಿದ್ದರು. ಈ ಪೈಕಿ ವಾರಸುದಾರರು ಪತ್ತೆಯಾಗದ, ಗುರುತು ಸಿಗದ 28 ಶವಗಳಿಗೆ ಭುವನೇಶ್ವರ ಮಹಾನಗರ ಪಾಲಿಕೆ ವತಿಯಿಂದ ನಿನ್ನೆಯಷ್ಟೇ (ಬುಧವಾರ, ಅಕ್ಟೋಬರ್ 11) ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.