ADVERTISEMENT

ದೆಹಲಿ ಮುಖ್ಯಮಂತ್ರಿ ನಿವಾಸದ ನವೀಕರಣ: 5 ಟಿ.ವಿ.; 14 ಎಸಿ; ₹60 ಲಕ್ಷ ಖರ್ಚು

ಏಜೆನ್ಸೀಸ್
Published 2 ಜುಲೈ 2025, 10:11 IST
Last Updated 2 ಜುಲೈ 2025, 10:11 IST
<div class="paragraphs"><p>ರೇಖಾ ಗುಪ್ತಾ</p></div>

ರೇಖಾ ಗುಪ್ತಾ

   

ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸವಾದ ರಾಜ್ ನಿವಾಸ ಮಾರ್ಗದಲ್ಲಿರುವ ಬಂಗಲೆ ಸಂಖ್ಯೆ 1ರ ನವೀಕರಣ ಇದೇ ತಿಂಗಳು ನಡೆಯಲಿದ್ದು, ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದಿದೆ.

ನವೀಕರಣದಲ್ಲಿ ವಿದ್ಯುತ್‌ ಉಪಕರಣಗಳ ಬದಲಾವಣೆ ಮುಖ್ಯವಾಗಿ ಇರಲಿದೆ. ಇದಕ್ಕೆ ಜುಲೈ 4ರಂದು ಬಿಡ್‌ ಆರಂಭವಾಗಲಿದೆ. ಟೆಂಡರ್‌ ಘೋಷಣೆಯಾಗುತ್ತಿದ್ದಂತೆ 60 ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಮುಖ್ಯಮಂತ್ರಿ ರೇಖಾ ಅವರಿಗೆ ಎರಡು ಬಂಗಲೆಗಳು ಮಂಜೂರಾಗಿವೆ. ಇದರಲ್ಲಿ ಬಂಗಲೆ ಸಂಖ್ಯೆ 1ರಲ್ಲಿ ಅವರು ಉಳಿಯಲಿದ್ದಾರೆ. ಆದರೆ ಬಂಗಲೆ ಸಂಖ್ಯೆ 2 ಅನ್ನು ಅವರು ಗೃಹ ಕಚೇರಿಯಾಗಿ ಬಳಸಿಕೊಳ್ಳಲಿದ್ದಾರೆ ಎಂದೆನ್ನಲಾಗಿದೆ.

ಜೂನ್ 28ರಂದು ಟೆಂಡರ್‌ ಕರೆಯಲಾಗಿತ್ತು. ಒಟ್ಟು ₹60 ಲಕ್ಷದ ಈ ಟೆಂಡರ್‌ನಲ್ಲಿ ₹9.3 ಲಕ್ಷದ ಐದು ಟಿ.ವಿ.ಗಳನ್ನು ಅಳವಡಿಸಬೇಕಿದೆ. ₹7.7 ಲಕ್ಷದಲ್ಲಿ 14 ಹವಾನಿಯಂತ್ರಿತ ಸಾಧನಗಳು, ₹5.74 ಲಕ್ಷದ 14 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕಿದೆ. ₹2ಲಕ್ಷ ಮೌಲ್ಯದ ಯುಪಿಎಸ್‌ ಅಳವಡಿಸಬೇಕು ಎಂದೂ ಹೇಳಲಾಗಿದೆ.

ಇದಲ್ಲದೇ, ರಿಮೋಟ್‌ ಇರುವ 23 ಫ್ಯಾನ್‌ಗಳಿಗೆ ₹1.8 ಲಕ್ಷ, ಟೋಸ್ಟ್‌ ತಯಾರಿಸುವ ಗ್ರಿಲ್‌ (₹85 ಸಾವಿರ), ಆಟೊಮ್ಯಾಟಿಕ್‌ ವಾಷಿಂಗ್‌ ಮಷಿನ್‌ (₹77 ಸಾವಿರ), ಪಾತ್ರೆ ತೊಳೆಯುವ ಯಂತ್ರ (₹60 ಸಾವಿರ); ಅಡುಗೆ ಅನಿಲ ಒಲೆ (₹63 ಸಾವಿರ), ಮೈಕ್ರೊವೇವ್ ಅವನ್‌ ₹32ಸಾವಿರ ಮತ್ತು ಆರು ಗೀಸರ್‌ (₹91 ಸಾವಿರ) ಅಳವಡಿಸಬೇಕು ಎಂದು ಹೇಳಲಾಗಿದೆ.

ಒಟ್ಟು 115 ದೀಪಗಳನ್ನು ಅಳವಡಿಸಬೇಕಿದೆ. ಇದರಲ್ಲಿ ಗೋಡೆಗೆ ಅಳವಡಿಸುವ, ತೂಗುಹಾಕುವ ದೀಪಗಳು ಮತ್ತು ಮೂರು ದೊಡ್ಡ ಝೂಮರ್‌ಗಳನ್ನು ಅಳವಡಿಸಬೇಕಿದೆ. ಇದಕ್ಕಾಗಿ ₹6.03 ಲಕ್ಷವನ್ನು ಇಲಾಖೆ ಮೀಸಲಿಟ್ಟಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕೇಜ್ರಿವಾಲ್‌ ಇದ್ದ ಬಂಗಲೆ ನಿರಾಕರಿಸಿದ ರೇಖಾ ಗುಪ್ತಾ

ಕಳೆದ ಫೆಬ್ರುವರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ರೇಖಾ ಅವರು ಸದ್ಯ ಶಾಲಿಮಾರ್ ಬಾಗ್ ಮನೆಯಲ್ಲಿದ್ದಾರೆ. 

ಆದರೆ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿದ್ದ ರಾಷ್ಟ್ರ ರಾಜಧಾನಿಯ ಫ್ಲಾಗ್‌ ಸ್ಟಾಫ್‌ ರಸ್ತೆಯ ನಂ. 6ನೇ ಬಂಗಲೆಯಲ್ಲಿ ಇರಲು ನಿರಾಕರಿಸಿದರು. ಈ ಬಂಗಲೆಯೂ ನವೀಕರಣಗೊಂಡಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಆರೋಪಿಸಿದ್ದರು. ಜತೆಗೆ ‘ಶೀಶಮಹಲ್‌’ ಎಂದೂ ಕರೆದಿದ್ದರು. ಈ ಬಂಗಲೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ರೇಖಾ ಗುಪ್ತಾ ಅವರು ಶಪತ ಮಾಡಿದ್ದರು.

3.60 ಲಕ್ಷ ಚದರಡಿಯಲ್ಲಿರುವ ಈ ಬಂಗಲೆಯಲ್ಲಿ 2015ರಿಂದ 2024ರ ಅಕ್ಟೋಬರ್‌ವರೆಗೂ ಕೇಜ್ರಿವಾಲ್‌ ಅವರಿದ್ದರು. ಆದರೆ ಅವರ ವಿರುದ್ಧ ವ್ಯಾಪಕ ಆರೋಪ ಮತ್ತು ರಾಜಕೀಯ ಸಂಘರ್ಷದಿಂದಾಗಿ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಬಂಗಲೆ ತೊರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.