ADVERTISEMENT

ಇಂಧನ ದರ ಏರಿಕೆ: ಕೇಜ್ರಿವಾಲ್ ಮೌನ ಪ್ರಶ್ನಿಸಿದ ಕಾಂಗ್ರೆಸ್

ಪಿಟಿಐ
Published 10 ಜುಲೈ 2021, 17:00 IST
Last Updated 10 ಜುಲೈ 2021, 17:00 IST
ಅರವಿಂದ ಕೇಜ್ರಿವಾಲ್ (ಪಿಟಿಐ ಚಿತ್ರ)
ಅರವಿಂದ ಕೇಜ್ರಿವಾಲ್ (ಪಿಟಿಐ ಚಿತ್ರ)   

ನವದೆಹಲಿ: ಇಂಧನ ದರ ಏರಿಕೆಗೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೌನವನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ದೆಹಲಿಯಲ್ಲಿ ಇಂಧನ ದರದ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ನ ದೆಹಲಿ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಅವರು ಕೇಜ್ರಿವಾಲ್‌ಗೆ ಪತ್ರ ಬರೆದಿದ್ದಾರೆ.

ಇಂಧನ ದರ ಹೆಚ್ಚಳದಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಗಮನ ಸೆಳೆಯಲಾಗಿದೆ ಎಂದು ಕಾಂಗ್ರೆಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ದೆಹಲಿ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್‌ಗೆ ₹23 ಮತ್ತು ಪ್ರತಿ ಲೀಟರ್‌ ಡೀಸೆಲ್‌ಗೆ ₹13 ವ್ಯಾಟ್ ಸಂಗ್ರಹಿಸುತ್ತಿದೆ. ಇದು ದೆಹಲಿಯ ಜನತೆಗೆ ದ್ರೋಹ ಬಗೆಯುವ ಕೆಲಸ. ಇದಕ್ಕೆ ದೆಹಲಿಯ ಜನರು ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆ ಬಯಸುತ್ತಿದ್ದಾರೆ. ಮೋದಿ ಸರ್ಕಾರವು ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಈಗಾಗಲೇ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

‘ಇಂಧನ ದರ ಗಗನಕ್ಕೇರಿದರೂ ದೆಹಲಿ ಮುಖ್ಯಮಂತ್ರಿಗಳು ಯಾಕೆ ಮೌನವಾಗಿದ್ದಾರೆ. ಅವರ್‍ಯಾಕೆ ಮೋದಿ ಸರ್ಕಾರದ ಗಮನ ಸೆಳೆದು ತೆರಿಗೆ ಕಡಿಮೆ ಮಾಡಿಸಲು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಪಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲು ಯತ್ನಿಸುತ್ತಿಲ್ಲ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.