ADVERTISEMENT

ಸಂಸತ್ ಭದ್ರತಾ ಲೋಪ ಪ್ರಕರಣ: ಆರೋಪಿ ಲಲಿತ್ ಝಾ ಪೊಲೀಸ್ ವಶದ ಅವಧಿ ವಿಸ್ತರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2023, 6:38 IST
Last Updated 22 ಡಿಸೆಂಬರ್ 2023, 6:38 IST
<div class="paragraphs"><p>ಲೋಕಸಭೆಯಲ್ಲಿ ಭದ್ರತಾ ಲೋಪ</p></div>

ಲೋಕಸಭೆಯಲ್ಲಿ ಭದ್ರತಾ ಲೋಪ

   

ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಐದನೇ ಆರೋಪಿ ಲಿಲಿತ್ ಝಾ ಅವರ ಪೊಲೀಸ್‌ ವಶದ ಅವಧಿಯನ್ನು ಜನವರಿ 5ರವರೆಗೆ ವಿಸ್ತರಿಸಿ ದೆಹಲಿಯ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ADVERTISEMENT

ಪ್ರಕರಣದಲ್ಲಿ ಇತರೆ ನಾಲ್ವರು ಆರೋಪಿಗಳಾದ ಮನೋರಂಜನ್‌ ಡಿ., ಸಾಗರ್‌ ಶರ್ಮಾ, ಅಮೋಲ್‌ ಧನರಾಜ್‌ ಶಿಂದೆ ಮತ್ತು ನೀಲಂ ದೇವಿ ಅವರ ಪೊಲೀಸ್‌ ವಶದ ಅವಧಿಯನ್ನು ಜನವರಿ 5ರವರೆಗೆ ವಿಸ್ತರಿಸಿ ವಿಶೇಷ ನ್ಯಾಯಾಧೀಶೆ ಹರದೀಪ್‌ ಕೌರ್‌ ಗುರುವಾರ ಆದೇಶ ಹೊರಡಿಸಿದ್ದರು.

ಪ್ರಕರಣ ಸಂಬಂಧ ಈವರೆಗೆ ಆರು ಮಂದಿಯನ್ನು (ಲಲಿತ್ ಝಾ, ಮಹೇಶ್ ಕುಮಾವತ್, ಡಿ.ಮನೋರಂಜನ್, ಸಾಗರ್ ಶರ್ಮಾ, ಅಮೋಲ್ ಶಿಂಧೆ, ನೀಲಂ ಶರ್ಮಾ) ಬಂಧಿಸಲಾಗಿದೆ. ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗಿದೆ.

ಸಂಸತ್ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಗಿತ್ತು. ಡಿಸೆಂಬರ್ 13ರಂದು ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ 'ಸ್ಮೋಕ್ ಕ್ಯಾನ್' (ಹಳದಿ ಬಣ್ಣದ ಹೊಗೆ) ಹಾರಿಸಿ ದಾಂಧಲೆ ಎಬ್ಬಿಸಿದ್ದರು. ಇದೇ ಸಮಯದಲ್ಲಿ ಮತ್ತಿಬ್ಬರು ಸಂಸತ್‌ನ ಹೊರಗಡೆ ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.