ADVERTISEMENT

ರೇಬಿಸ್‌ ಅನ್ನು ಅಧಿಸೂಚಿತ ರೋಗ ಎಂದು ಘೋಷಿಸಲಿದೆ ದೆಹಲಿ ಸರ್ಕಾರ

ಪಿಟಿಐ
Published 4 ಜನವರಿ 2026, 14:26 IST
Last Updated 4 ಜನವರಿ 2026, 14:26 IST
   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರೇಬಿಸ್‌ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅದನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ 'ಅಧಿಸೂಚಿತ ರೋಗ' ಎಂದು ಘೋಷಿಸಲು ದೆಹಲಿ ಸರ್ಕಾರ ಸಿದ್ಧತೆ ನಡೆಸಿದೆ.

ಈ ಕಾಯಿಲೆಯಿಂದ ಬಳಲುತ್ತಿರುವವರ ಮೇಲ್ವಿಚಾರಣೆಯನ್ನು ಬಲಪಡಿಸಲು ಹಾಗೂ ಸಕಾಲದಲ್ಲಿ ಚಿಕಿತ್ಸೆ ಒದಗಿಸುವುದನ್ನು ಖಾತ್ರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ.

'ದೆಹಲಿಯಲ್ಲಿ ರೇಬಿಸ್‌ನಿಂದ ಒಂದೇ ಒಂದು ಸಾವು ಕೂಡ ಸಂಭವಿಸದಂತೆ ಗುರಿ ಸಾಧಿಸುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆ ಇದಾಗಿದೆ' ಎಂದು ದೆಹಲಿ ಆರೋಗ್ಯ ಸಚಿವ ಪಂಕಜ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ADVERTISEMENT

ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಜಾರಿಯಾದಲ್ಲಿ, ವೈದ್ಯಕೀಯ ಕಾಲೇಜುಗಳೂ ಸೇರಿದಂತೆ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಶಂಕಿತ ಪ್ರಕರಣಗಳ ಕುರಿತು ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳಿಗೆ ವರದಿ ನೀಡುವುದು ಕಡ್ಡಾಯ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೋಗ ಪತ್ತೆ ಮೇಲ್ವಿಚಾರಣೆಯನ್ನು ಬಲಪಡಿಸುವುದಷ್ಟೇ ಅಲ್ಲದೆ, ಸಕಾಲದಲ್ಲಿ ಶಂಕಿತ ಪ್ರಕರಣಗಳ ವರದಿಯನ್ನು ಖಾತ್ರಿ ಮಾಡಿಕೊಳ್ಳಲು ಹಾಗೂ ಆ ಮೂಲಕ ರೇಬಿಸ್‌ ಹರಡುವುದನ್ನು ತಡೆಯಲು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳುವ ಉದ್ದೇಶ ಈ ಉಪಕ್ರಮದ ಹಿಂದೆ ಇದೆ ಎಂದು ಉಲ್ಲೇಖಿಸಲಾಗಿದೆ.

ಸರ್ಕಾರವು ಮನುಷ್ಯರಿಗಷ್ಟೇ ಅಲ್ಲದೆ, ನಾಯಿಗಳು ಮತ್ತಿತರ ಪ್ರಾಣಿಗಳಿಗೂ ರೇಬಿಸ್‌ ಲಸಿಕಾ ಸೌಲಭ್ಯಗಳನ್ನು ಹೆಚ್ಚಿಸಲಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ದೆಹಲಿ ಸರ್ಕಾರವು, ಸ್ಥಳೀಯ ಸಂಸ್ಥೆಗಳು, ಪಶುಸಂಗೋಪನಾ ಇಲಾಖೆ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳ ಸಹಯೋಗದಲ್ಲಿ 'ರೇಬಿಸ್ ನಿರ್ಮೂಲನೆಗಾಗಿ ರಾಜ್ಯ ಕ್ರಿಯಾ ಯೋಜನೆ' ರೂಪಿಸುವ ಯೋಜನೆ ಕೈಗೆತ್ತಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.