ಡಿ.ಕೆ.ಶಿವಕುಮಾರ್
ಬೆಂಗಳೂರು: ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಆದರೆ 'ಮತಗಟ್ಟೆ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಏನೇ ಇದ್ದರೂ ಜನಾದೇಶಕ್ಕಾಗಿ ಕಾಯುತ್ತಿರುವೆ' ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಎರಡು ಚುನಾವಣೋತ್ತರ ಸಮೀಕ್ಷೆಗಳು ಮಾತ್ರ ಆಮ್ ಆದ್ಮಿ ಪಕ್ಷ (ಎಎಪಿ) ವಿಜಯಶಾಲಿಯಾಗಿ, ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿವೆ. ಹಾಗೆಯೇ ಕಾಂಗ್ರೆಸ್ ಉತ್ತಮ ಸಾಧನೆ ಮಾಡುವಲ್ಲಿ ಮತ್ತೆ ವಿಫಲಗೊಳ್ಳಲಿದೆ ಎಂದು ಹೇಳಿವೆ.
ಈ ಕುರಿತು ವರದಿಗಾರರು ಕೇಳಿದಾಗ, 'ನನಗೆ ಮತಗಟ್ಟೆ ಸಮೀಕ್ಷೆಗಳ ಮೇಲೆ ನಂಬಿಕೆ ಇಲ್ಲ. ಮತದಾರರ ತೀರ್ಪು ಏನಾಗಲಿದೆ ಕಾದು ನೋಡೋಣ' ಎಂದು ಹೇಳಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಯ ಫಲಿತಾಂಶ ಫೆಬ್ರುವರಿ 8ರಂದು ಹೊರಬೀಳಲಿದೆ. ಫೆಬ್ರುವರಿ 5ರಂದು ಮತದಾನ ನಡೆದಿತ್ತು. ಶೇಕಡಾ 60ಕ್ಕೂ ಅಧಿಕ ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.