ಸಂದೀಪ್ ದೀಕ್ಷಿತ್
ಎಕ್ಸ್: @harsht2024
ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಅವರ ಪುತ್ರ, ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ನವದೆಹಲಿ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಕಣಕ್ಕಿಳಿಸಿದೆ. ಸದ್ಯ ಈ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಪ್ರತಿನಿಧಿಸುತ್ತಿದ್ದಾರೆ.
ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸಂದೀಪ್ ದೀಕ್ಷಿತ್ ಅವರ ಹೆಸರನ್ನು ಅಖೈರುಗೊಳಿಸಲಾಗಿದೆ. ಈ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರೂ ಹಾಜರಿದ್ದರು.
2013ರಲ್ಲಿ ಮೊದಲ ಬಾರಿಗೆ ಇದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅರವಿಂದ ಕೇಜ್ರಿವಾಲ್, ಶೀಲಾ ದೀಕ್ಷಿತ್ ಅವರನ್ನು ಮಣಿಸಿದ್ದರು.
ಸಂದೀಪ್ ಅವರ ಜೊತೆಗೆ ಇನ್ನು 20 ಹೆಸರುಗಳನ್ನು ಸಿಇಸಿ ಅಂತಿಮಗೊಳಿಸಿದೆ. ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದರ್ ಯಾದವ್ (ಬಡ್ಲಿ), ಹಿರಿಯ ನಾಯಕರಾದ ಅನಿಲ್ ಚೌದರಿ (ಪಟ್‌ಪರ್‌ಗನಿ), ರಾಗಿನಿ ನಾಯಕ್ (ವಜೀರ್‌ಪುರ), ಅಭಿಷೇಕ್ ದತ್ತ್ (ಕಸ್ತೂರ್ಬಾ ನಗರ), ಮುಡಿಟ್ ಅಗರ್ವಾಲ್ (ಚಾಂದಿನಿ ಚೌಕ್) ಹಾಗೂ ಹಾರೂನ್ ಯೂಸುಫ್ (ಬಲ್ಲಿಮರನ್) ಅವರಿಗೂ ಟಿಕೆಟ್ ಘೋಷಿಸಿದೆ.
ಜೈ ಕಿಶನ್ (ಸುಲ್ತಾನ್‌ಪುರ ಮಜ್ರಾ) ಹಾಗೂ ಅನಿಲ್ ಭಾರಧ್ವಜ್ (ಸರ್ದಾರ್ ಬಜಾರ್) ಅವರಿಗೂ ಮೊದಲ ಪಟ್ಟಿಯಲ್ಲಿ ಅವಕಾಶ ಸಿಕ್ಕಿದೆ. ಸಲೀಂಪುರ ಕ್ಷೇತ್ರದಿಂದ ಟಿಕೆಟ್ ತಪ್ಪಿದ ಕಾರಣಕ್ಕೆ ಎಎಪಿ ತೊರೆದಿದ್ದ ಶಾಸಕ ಅಬ್ದುಲ್ ರೆಹಮಾನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗನೂ ಆಗಿರುವ, ಮಾಜಿ ಶಾಸಕರೂ ಆಗಿರುವ ಆದರ್ಶ್ ಶಾಸ್ತ್ರಿಯವರಿಗೆ ದ್ವಾರಕಾ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ. 20215–2020ರ ಅವಧಿಯಲ್ಲಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.