ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಆಪ್) ನಿಚ್ಚಳ ಮೇಲುಗೈಸಾಧಿಸುವುದು ಖಚಿತ ಎಂದುಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಸಾರಿ ಹೇಳಿದ ನಂತರ ಕಾಂಗ್ರೆಸ್ ಪಾಳಯದಲ್ಲಿ ‘ಮುಂದೇನು?’ ಎಂಬ ಪ್ರಶ್ನೆ ಕಾಣಿಸಿಕೊಂಡಿದೆ.
ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಗಳಲ್ಲಿಪಕ್ಷದ ಬಗ್ಗೆ ಮತದಾರರು ಒಲವು ತೋರಿದ್ದನ್ನು ಗಮನಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರು ದೆಹಲಿ ಮತದಾರರಿಂದಲೂ ಅಂಥದ್ದೇ ಸ್ಪಂದನೆ ನಿರೀಕ್ಷಿಸಿದ್ದರು. ಈ ಮೂಲಕ ಬಿಜೆಪಿಗೆ ಪರ್ಯಾಯವಾಗಿ ನಿಲ್ಲುವ ಶಕ್ತಿ ತನಗಿನ್ನೂ ಇದೆ ಎಂದು ಸಾಬೀತುಪಡಿಸಲು ಕಾಂಗ್ರೆಸ್ ಚಿಂತಕರ ಚಾವಡಿ ಆಲೋಚಿಸಿತ್ತು.
ಕಾಂಗ್ರೆಸ್ ನೆಚ್ಚಿಕೊಂಡಿದ್ದ ಅಲ್ಪಸಂಖ್ಯಾತರ ಮತಗಳೂ ಈ ಬಾರಿ ಆಪ್ ಪರವಾಗಿಯೇ ವಾಲಿರಬಹುದು ಎಂದುಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಒಂದು ವೇಳೆ ಅದು ನಿಜವೇ ಆಗಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಪುನರುತ್ಥಾನ ಯೋಜನೆಗಳಿಗೆ ಹಿನ್ನಡೆಯಾಗಬಹುದು ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಪಿ.ಸಿ.ಚಾಕೊ, ಕೀರ್ತಿ ಆಜಾದ್‌ರಂಥ ಹಿರಿಯ ನಾಯಕರೇನೋ ಚುನಾವಣೋತ್ತರ ಸಮೀಕ್ಷೆಗಳನ್ನು ಸಾರಾಸಗಟಾಗಿ ತಳ್ಳಿಹಾಕಿ, ‘ಕಾಂಗ್ರೆಸ್ ಇನ್ನಷ್ಟು ಉತ್ತಮ ಸಾಧನೆ ಮಾಡಲಿದೆ’ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಇಂಥ ಹೇಳಿಕೆಗಳು ಕಾರ್ಯಕರ್ತರಲ್ಲಿ ಉತ್ಸಾಹ ಚಿಗುರಿಸುತ್ತಿಲ್ಲ.
‘ಅರವಿಂದ್ ಕೇಜ್ರಿವಾಲ್‌ರಂಥ ಜನಪ್ರಿಯ ನಾಯಕನ ಎದುರು ಸ್ಪರ್ಧಿಸುವಾಗಕಾಂಗ್ರೆಸ್ ಪಕ್ಷಕ್ಕೆ ಒಂದೊಳ್ಳೆ ಮುಖ್ಯಮಂತ್ರಿ ಮುಖ ಇರಬೇಕಿತ್ತು. ಈಗಿನ ಕಾಲದಲ್ಲಿ ಜನರು ಮುಖ್ಯಮಂತ್ರಿ ಯಾರು ಎಂಬುದನ್ನು ತಿಳಿದ ನಂತರ ಯಾವ ಪಕ್ಷಕ್ಕೆ, ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಯೋಚಿಸುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು ತಮ್ಮ ಅಳಲು ತೋಡಿಕೊಂಡರು.
‘ಪಕ್ಷದ ಇತಿಹಾಸದ ಬಗ್ಗೆ ಹೇಳಿ ಚುನಾವಣೆಗಳನ್ನು ಗೆಲ್ಲುವ ಕಾಲ ಎಂದೋ ಮುಗಿದು ಹೋಗಿದೆ. ನಾವು ಗೆದ್ದರೆ ಏನು ಮಾಡ್ತೀವಿ ಎನ್ನುವ ಬಗ್ಗೆ ವಿವರಿಸುವುದು ಇಂದಿನ ಕಾರ್ಯತಂತ್ರವಾಗಬೇಕಿತ್ತು.2013ರಲ್ಲಿ ದೆಹಲಿಯಲ್ಲಿ ನಾವು ಸೋತಿದ್ದು ನೀರು ಮತ್ತು ವಿದ್ಯುತ್ ಸಮಸ್ಯೆಗಳಿಂದ. 2019ರಲ್ಲಿ ಆಪ್ ಮತ್ತೆ ಅಧಿಕಾರಕ್ಕೆ ಬರುವುದೂ ನೀರು ಮತ್ತು ವಿದ್ಯುತ್ ಸಮಸ್ಯೆ ಪರಿಹರಿಸಿದ್ದರಿಂದ’ ಎಂದು ಅವರು ನುಡಿದರು.
ಕಾಂಗ್ರೆಸ್ ಮತಗಳಿಕೆಯಿಂದ ಬಿಜೆಪಿಗೆ ಲಾಭ
ದೆಹಲಿಯಲ್ಲಿ ಆಪ್ ಗೆಲ್ಲುವುದು ಖಚಿತ ಎಂಬ ಕಹಿಯ ಜೊತೆಗೆ ಬಿಜೆಪಿಯೂ ಸೋಲಲಿದೆ ಎನ್ನುವ ಸಿಹಿಯನ್ನೂ ಚುನಾವಣೋತ್ತರ ಸಮೀಕ್ಷೆಗಳ ನಂತರ ಕಾಂಗ್ರೆಸ್ ಸವಿಯುತ್ತಿದೆ. ಆದರೆ ಬಹುಕಾಲದಿಂದ ತನ್ನ ಬೆಂಬಲಿಗರಾಗಿದ್ದ ಸಮುದಾಯಗಳು ಮತ್ತು ಮತದಾರರು ಆಪ್ ಕಡೆಗೆ ವಾಲುತ್ತಿರುವ ವಿದ್ಯಮಾನವನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ಗಟ್ಟಿಯಾದ ಚಿಂತನ–ಮಂಥನಗಳು ನಡೆಯುತ್ತಿಲ್ಲ.
ಕಳೆದ ಕೆಲ ಚುನಾವಣೆಗಳಿಂದ ಕಾಂಗ್ರೆಸ್ ಮತ್ತು ಆಪ್ ಮತಗಳಿಕೆ ಪ್ರಮಾಣದಲ್ಲಿ ಹೆಚ್ಚುಕಡಿಮೆಯಾಗಿದೆ. ಆದರೆ ಬಿಜೆಪಿ ಮತಗಳಿಕೆಯಲ್ಲಿ ಮಾತ್ರ ಹೇಳಿಕೊಳ್ಳುವಂಥ ವ್ಯತ್ಯಾಸಗಳು ಕಂಡುಬಂದಿಲ್ಲ.ಈ ಬಾರಿಯಾದರೂ ಕಾಂಗ್ರೆಸ್‌ನ ಮತಗಳಿಕೆ ಸುಧಾರಿಸಿದರೆ ಆಪ್‌ಗೆ ಹಿನ್ನಡೆಯಾಗಬಹುದುಎಂಬ ನಿರೀಕ್ಷೆ ಬಿಜೆಪಿ ವಲಯಗಳಲ್ಲಿ ವ್ಯಕ್ತವಾಗುತ್ತಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆಗಳ ನಂತರ ಬಿಜೆಪಿ ಲೆಕ್ಕಾಚಾರವೂ ತಲೆಕೆಳಕಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಶಾಹೀನ್ ಬಾಗ್ವಿಚಾರದಲ್ಲಿ ಕೇಜ್ರಿವಾಲ್ಮೌನ, ಪಕ್ಷದ ಪೌರತ್ವ ಕಾಯ್ದೆ ವಿಚಾರದಲ್ಲಿ ‘ಆಪ್’ ಪಕ್ಷದ ನಿಲುವಿನಿಂದಮುಸ್ಲಿಂ ಸಮುದಾಯ ಸಿಟ್ಟಾಗಿದೆ. ಇದರಿಂದಕಾಂಗ್ರೆಸ್‌ಗೆ ಲಾಭವಾಗಬಹುದು ಎಂಬ ಲೆಕ್ಕಾಚಾರಗಳು ಕೆಲ ಸಮಯಚಾಲ್ತಿಯಲ್ಲಿದ್ದವು.
ಆದರೆ ಮತದಾನದ ಹೊತ್ತಿಗೆ ಈ ಲೆಕ್ಕಾಚಾರಗಳು ಏರುಪೇರಾದವು.‘ದೆಹಲಿ ಮಟ್ಟಿಗೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ವಿಚಾರದಲ್ಲಿ ಕಾಂಗ್ರೆಸ್‌ಗೆ ಹೋಲಿಸಿದರೆ ಆಪ್ ಉತ್ತಮ ಸ್ಥಿತಿಯಲ್ಲಿದೆ. ಹೀಗಾಗಿ ಮುಸ್ಲಿಮರ ಮತಗಳು ಆಪ್‌ಗೆ ಒಲಿದಿರುವ ಸಾಧ್ಯತೆಯೇ ಹೆಚ್ಚು’ ಎಂಬ ವಿಶ್ಲೇಷಣೆಗಳು ಈಗ ಚಾಲ್ತಿಗೆ ಬಂದಿವೆ.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇನ್ನೇನುಪ್ರಕಟವಾಗಲಿದೆ. ಆ ಮೂಲಕ ಯಾರಿಗೆ ಗದ್ದುಗೆ ಎನ್ನುವ ಕುತೂಹಲಕ್ಕೂ ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.