
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ₹1,100 ಕೋಟಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ತಿಳಿಸಿದೆ.
ಈ ಸಂಬಂಧ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರ ವಿರುದ್ಧ ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಇ.ಡಿ ಪೂರಕ ದೋಷಾರೋಪಪಟ್ಟಿ ಸಲ್ಲಿಸಿದೆ. ಇದರಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ಅಕ್ರಮ ವರ್ಗಾವಣೆ ನಡೆದಿದ್ದು, ಕೆ. ಕವಿತಾ ₹292.8 ಕೋಟಿ ಮೌಲ್ಯದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಪೈಕಿ ಕವಿತಾ ಅವರು ಎಎಪಿ ಮುಖಂಡರಿಗೆ ₹100 ಕಿಕ್‌ಬ್ಯಾಕ್ ನೀಡಿದ್ದರು ಎಂದು ಇ.ಡಿ ಉಲ್ಲೇಖಿಸಿದೆ.
ಡಿಜಿಟಲ್ ಸಾಕ್ಷ್ಯ ನಾಶ: ಕವಿತಾ ಅವರು ತಮ್ಮ ಮೊಬೈಲ್‌ನಲ್ಲಿದ್ದ ಸಾಕ್ಷ್ಯ ಮತ್ತು ಮಾಹಿತಿಗಳನ್ನು ಅಳಿಸಿಹಾಕಿದ್ದಾರೆ. ಅವರು ಪರಿಶೀಲನೆಗಾಗಿ 9 ಮೊಬೈಲ್‌ಗಳನ್ನು ನೀಡಿದ್ದರು. ಆದರೆ, ಅವೆಲ್ಲವೂ ಫಾರ್ಮ್ಯಾಟ್ ಆಗಿದ್ದು, ಯಾವುದೇ ದತ್ತಾಂಶ ಇರಲಿಲ್ಲ. ಈ ಕುರಿತು ಅವರು ಯಾವುದೇ ವಿವರಣೆ ನೀಡಿಲ್ಲ. ಜೊತೆಗೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಯತ್ನ ಮಾಡಿದ್ದಾರೆ ಎಂದು ಇ.ಡಿ ತಿಳಿಸಿದೆ.
ಈ ಕುರಿತು ಇ.ಡಿ ವಾದ ಆಲಿಸಿದ ವಿಶೇಷ ನ್ಯಾಯಾಧೀಶರಾದ ಕಾವೇರಿ ಬಾವೇಜಾ ಅವರು, ಕವಿತಾ ಅವರ ನ್ಯಾಯಾಂಗ ಬಂಧನವನ್ನು ಜುಲೈ 3ರವರೆಗೆ ವಿಸ್ತರಿಸಿದರು. ಈ ಪ್ರಕರಣದ ಸಹ ಆರೋಪಿಗಳಾದ ಪ್ರಿನ್ಸ್, ದಾಮೋದರ್ ಮತ್ತು ಅರವಿಂದ ಸಿಂಗ್ ಅವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಈ ಮೂವರು ಆರೋಪಿಗಳ ವಿರುದ್ಧ ಇ.ಡಿ ಚಾರ್ಜ್‌ಶೀಟ್ ಹಾಕಲಾಗಿದೆ. ಆದಾಗ್ಯೂ, ಅವರ ಬಂಧನ ಆಗಿರಲಿಲ್ಲ.
ಈ ಹಗರಣದ ಕುರಿತು ಸಿಬಿಐ ಮತ್ತು ಇ.ಡಿ ದಾಖಲಿಸಿಕೊಂಡ ಎರಡು ಪ್ರಕರಣಗಳಲ್ಲಿ ಬಿಆರ್‌ಎಸ್ ನಾಯಕಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.