ಸಾಂದರ್ಭಿಕ ಚಿತ್ರ
ನವದೆಹಲಿ: 10 ವರ್ಷಗಳ ಹಳೆಯ ಡೀಸೆಲ್ ವಾಹನ ಹಾಗೂ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳು ಮಾಲಿನ್ಯಕಾರಕವೆಂದು ಏಕರೂಪವಾಗಿ ನಿರ್ಧರಿಸಿ ನಿಷೇಧಿಸಿರುವ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ದೆಹಲಿ ಸರ್ಕಾರವು ಮನವಿ ಸಲ್ಲಿಸಿದೆ.
‘ರಾಷ್ಟ್ರ ರಾಜಧಾನಿ ವ್ಯಾಪ್ತಿ (ಎನ್‌ಸಿಆರ್)ಯಲ್ಲಿ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಸಮಗ್ರ ನೀತಿಯ ಅಗತ್ಯವಿದೆ. ನೈಜ ಮಾಲಿನ್ಯ ಪ್ರಮಾಣವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಸದೃಢತಾ ಪ್ರಮಾಣಪತ್ರ, ವಾಹನಗಳ ಕ್ಷಮತೆ ಆಧರಿಸಿಯೇ ನಿರ್ಧರಿಸಬೇಕಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ಪ್ರಸ್ತುತ ಅನಿಯಂತ್ರಿತವಾಗಿ ವಾಹನಗಳ ವಯಸ್ಸು ಆಧರಿಸಿ ನಿಷೇಧ ನಿರ್ಧಾರ ಮಾಡುವ ಬದಲಾಗಿ, ಪ್ರತಿ ವಾಹನಗಳಿಂದ ಆಗುವ ನೈಜ ಮಾಲಿನ್ಯ ಪ್ರಮಾಣ ಹಾಗೂ ಅವುಗಳ ಕ್ಷಮತೆ ಆಧರಿಸಿ ಹೆಚ್ಚು ತರ್ಕಬದ್ಧವಾಗಿ ಪುರಾವೆ ಆಧರಿಸಿದ ನೀತಿ ಜಾರಿ ಮಾಡಬೇಕಾದ ಅಗತ್ಯವಿದೆ ಎಂದು ತನ್ನ ಅರ್ಜಿಯಲ್ಲಿ ವಿವರಿಸಿದೆ.
ಜುಲೈ 28ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ನ್ಯಾಯಪೀಠವು ಈ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
2014ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಎನ್‌ಸಿಆರ್ ವ್ಯಾಪ್ತಿಯಲ್ಲಿ 10 ವರ್ಷಗಳ ಹಳೆಯ ಡೀಸೆಲ್ ವಾಹನ ಹಾಗೂ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ಬಳಕೆಗೆ ನಿರ್ಬಂಧ ವಿಧಿಸಿತ್ತು. ನ್ಯಾಯಮಂಡಳಿಯ ನಿರ್ಧಾರವನ್ನು ಸುಪ್ರೀಂಕೋರ್ಟ್ 2018ರಲ್ಲಿ ಎತ್ತಿ ಹಿಡಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.