ADVERTISEMENT

ದೆಹಲಿ: ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶ ನಿರ್ಬಂಧ ಭಾಗಶ: ತೆರವು

ಪಿಟಿಐ
Published 18 ಜುಲೈ 2023, 3:01 IST
Last Updated 18 ಜುಲೈ 2023, 3:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯಮುನಾ ನದಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶದ ಮೇಲಿನ ನಿರ್ಬಂಧವನ್ನು ಭಾಗಶಃ ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ.

ಭಾರಿ ಮಳೆಯಿಂದಾಗಿ ಯಮುನಾ ನದಿ ನೀರಿನ ಮಟ್ಟವು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಂಘು ಸೇರಿದಂತೆ ನಗರದ ನಾಲ್ಕು ಗಡಿಗಳಿಂದ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಹೊರತುಪಡಿಸಿ ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

‘ಇದೀಗ, ಯಮುನಾ ನದಿ ನೀರಿನ ಮಟ್ಟ ಇಳಿಕೆ ಕಂಡಿದ್ದು, ದೆಹಲಿಯ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಣೆಗೊಂಡಿದೆ. ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶ ನಿರ್ಬಂಧವನ್ನು ಭಾಗಶಃ ತೆಗೆದುಹಾಕಲು ನಿರ್ಧರಿಸಲಾಗಿದೆ. ಆದರೆ ಸಿಂಘು ಗಡಿಯಲ್ಲಿ ಮಾತ್ರ ವಾಹನಗಳ ನಿರ್ಬಂಧ ಮುಂದುವರಿಯುತ್ತದೆ’ ಎಂದು ಸರ್ಕಾರ ತನ್ನ ಹೊಸ ಆದೇಶದಲ್ಲಿ ತಿಳಿಸಿದೆ.

ADVERTISEMENT

ಕಾಶ್ಮೀರಿ ಗೇಟ್‌‌ವರೆಗೆ ಸಾಗುತ್ತಿದ್ದ ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದ ಅಂತರ ರಾಜ್ಯ ಬಸ್‌ಗಳು ಸಿಂಘು ಗಡಿಯಲ್ಲಿ ನಿಲುಗಡೆಗೊಳ್ಳಲಿವೆ.

‘ಮುಂದಿನ ಆದೇಶದವರೆಗೆ ಈ ನಿರ್ದೇಶನಗಳು ಜಾರಿಯಲ್ಲಿರುತ್ತವೆ. ಅಗತ್ಯ ಸರಕುಗಳು, ಔಷಧಿಗಳು, ಹಸಿ ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಹಾಲು, ಮೊಟ್ಟೆ, ಐಸ್‌ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುವ ಟ್ರಕ್‌ಗಳಿಗೆ ಈ ನಿರ್ದೇಶನಗಳು ಅನ್ವಯಿಸುವುದಿಲ್ಲ’ ಎಂದು ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.