ADVERTISEMENT

ಕಪ್ಪು ಶಿಲೀಂಧ್ರ ಪ್ರಕರಣ ಹೆಚ್ಚಳ: ಸಾಂಕ್ರಾಮಿಕ ರೋಗವೆಂದು ಘೋಷಿಸಿದ ದೆಹಲಿ ಸರ್ಕಾರ

ಪಿಟಿಐ
Published 28 ಮೇ 2021, 5:44 IST
Last Updated 28 ಮೇ 2021, 5:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚುತ್ತಿದ್ದು, ದೆಹಲಿ ಸರ್ಕಾರವು ಗುರುವಾರ ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ನಗರದಲ್ಲಿ ಮಾರಣಾಂತಿಕ ಮ್ಯೂಕರ್ ಮೈಕೊಸಿಸ್‌ ಪ್ರಕರಣಗಳನ್ನು ನಿರ್ವಹಿಸಲು ಗವರ್ನರ್ ಅನಿಲ್ ಬೈಜಾಲ್ ಅವರು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ನಿಯಮಗಳನ್ನು ಹೊರಡಿಸಿದ್ದಾರೆ.

ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ದೆಹಲಿಯಲ್ಲಿ ಗುರುವಾರ 153 ಕಪ್ಪು ಶಿಲೀಂಧ್ರ ಅಥವಾ ಮ್ಯೂಕರ್‌ಮೈಕೊಸಿಸ್ ಪ್ರಕರಣಗಳು ದಾಖಲಾಗಿದ್ದು, ಇಂತಹ ಒಟ್ಟು ಪ್ರಕರಣಗಳ ಸಂಖ್ಯೆ 770 ಕ್ಕಿಂತ ಹೆಚ್ಚಾಗಿದೆ.

ನಗರದಲ್ಲಿ ಸುಮಾರು 620 ಕಪ್ಪು ಶಿಲೀಂಧ್ರ ಪ್ರಕರಣಗಳಿವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.

ADVERTISEMENT

ರೋಗ ನಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಗಳಲ್ಲಿ ವಿಶೇಷವಾಗಿ ಕೋವಿಡ್-19 ರೋಗಿಗಳಿಗೆ ಸ್ಟೆರಾಯ್ಡ್ ಬಳಸಿ ಚಿಕಿತ್ಸೆ ನೀಡಿದ್ದರೆ, ಅಂಥ ರೋಗಿಗಳಲ್ಲಿ ಅಪಾಯಕಾರಿ ಮ್ಯೂಕರ್‌ ಮೈಕೊಸಿಸ್ ಹರಡುವ ಅಪಾಯ ಹೆಚ್ಚಿದೆ ಎಂಬುದನ್ನು ದೆಹಲಿ ಎನ್‌ಸಿಟಿಯ ಲೆಫ್ಟಿನೆಂಟ್ ಗವರ್ನರ್ ಮನಗಂಡಿದ್ದಾರೆ ಎಂಬುದನ್ನು ಅಧಿಸೂಚನೆಯು ತಿಳಿಸಿದೆ

ದೆಹಲಿ ಆರೋಗ್ಯ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, 1897 ರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಹೊಸ ನಿಯಮಗಳನ್ನು ಹೊರಡಿಸಲಾಗಿದೆ.

ದೆಹಲಿ ಸಾಂಕ್ರಾಮಿಕ ರೋಗಗಳ (ಮ್ಯೂಕರ್‌ ಮೈಕೊಸಿಸ್) ನಿಯಮಗಳು, 2021, ಪ್ರಕಟಣೆಯ ದಿನಾಂಕದಿಂದ ಒಂದು ವರ್ಷಕ್ಕೆ ಮಾನ್ಯವಾಗಿರಲಿದೆ ಎಂದು ಹೇಳುತ್ತದೆ. ಎಲ್ಲಾ ಆರೋಗ್ಯ ಸೌಲಭ್ಯಗಳು, ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ರಾಷ್ಟ್ರ ರಾಜಧಾನಿಯಲ್ಲಿ ಕಪ್ಪು ಶಿಲೀಂಧ್ರದ ಪ್ರತಿ ಶಂಕಿತ ಅಥವಾ ದೃಢಪಟ್ಟ ಪ್ರಕರಣಗಳನ್ನು ವೈದ್ಯಕೀಯ ಅಧೀಕ್ಷಕರು ಅಥವಾ ವೈದ್ಯಕೀಯ ನಿರ್ದೇಶಕರು ಅಥವಾ ಆಸ್ಪತ್ರೆಯ ಉಸ್ತುವಾರಿ ಅಥವಾ ಸಂಬಂಧಪಟ್ಟ ಜಿಲ್ಲೆಯ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿಗಳ ಮೂಲಕ ನಗರ ಆರೋಗ್ಯ ಇಲಾಖೆಗೆ ವರದಿ ಮಾಡುತ್ತವೆ.

ಸಾಂಕ್ರಾಮಿಕ ರೋಗಗಳ ಕಾಯ್ದೆ, 1897 ರ ಪ್ರಕಾರ ಸುಮಾರು 20 ರಾಜ್ಯಗಳು ಕಪ್ಪು ಶಿಲೀಂಧ್ರ ಅಥವಾ ಮ್ಯೂಕರ್‌ ಮೈಕೊಸಿಸ್ ಅನ್ನು ಅಧಿಸೂಚಿತ ರೋಗವೆಂದು ಘೋಷಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಇತ್ತೀಚೆಗೆ ಹೇಳಿದ್ದಾರೆ.

ದೆಹಲಿಯ ಎಲ್ಲಾ ಆರೋಗ್ಯ ಸೌಲಭ್ಯಗಳು ಆರೋಗ್ಯ ಸಚಿವಾಲಯ ಹೊರಡಿಸಿದ ಕಪ್ಪು ಶಿಲೀಂಧ್ರದ ತಪಾಸಣೆ, ರೋಗನಿರ್ಣಯ ಮತ್ತು ನಿರ್ವಹಣೆಗೆ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ. 'ಆರೋಗ್ಯ ಇಲಾಖೆಯ ಪೂರ್ವಾನುಮತಿ ಇಲ್ಲದೆ ಕಪ್ಪು ಶಿಲೀಂಧ್ರದ ನಿರ್ವಹಣೆಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಸಂಘಟನೆಯು ಯಾವುದೇ ಮಾಹಿತಿಯನ್ನು ಹರಡುವಂತಿಲ್ಲ' ಎಂದು ಹೊಸ ನೀತಿಯಲ್ಲಿ ಹೇಳಿದೆ.

ಕಪ್ಪು ಶಿಲೀಂಧ್ರದ ಮೇಲಿನ ಈ ಹೊಸ ನೀತಿಗಳನ್ನು ಧಿಕ್ಕರಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಸಂಘಟನೆಯು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಸರಿಯಾಗಿ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ) ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲಾಗುವುದು ಎಂದು ನಿಯಮಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.