ADVERTISEMENT

ಕೋವಿಡ್‌ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವ ಯೋಜನೆಗೆ ದೆಹಲಿ ಸಿಎಂ ಚಾಲನೆ

ಪಿಟಿಐ
Published 6 ಜುಲೈ 2021, 9:51 IST
Last Updated 6 ಜುಲೈ 2021, 9:51 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ಕೋವಿಡ್‌ ಸೋಂಕಿನಿಂದ ಮೃತಪಟ್ಟ ಕುಟುಂಬದವರಿಗೆ ಆರ್ಥಿಕ ನೆರವು ನೀಡುವ ‘ಮುಖ್ಯಮಂತ್ರಿ ಕೋವಿಡ್‌–19 ಪರಿವಾರ ಆರ್ಥಿಕ ಸಹಾಯ ಯೋಜನೆ‘ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಚಾಲನೆ ನೀಡಿದರು.

ಈ ಯೋಜನೆಯಡಿ ಕೋವಿಡ್‌ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪ್ರತಿ ಕುಟುಂಬಕ್ಕೆ ₹50 ಸಾವಿರ ಎಕ್ಸ್‌ಗ್ರೇಷಿಯಾ ನೀಡಲಾಗುತ್ತದೆ. ಸಂತ್ರಸ್ತ ಕುಟುಂಬಕ್ಕೆ ಮೃತ ವ್ಯಕ್ತಿಯೊಬ್ಬರೇ ದುಡಿಮೆಯ ಆಧಾರವಾಗಿದ್ದರೆ, ಅಂಥ ಕುಟುಂಬಕ್ಕೆ ಹೆಚ್ಚುವರಿಯಾಗಿ ಮಾಸಿಕ ₹2500 ನೀಡಲಾಗುತ್ತದೆ.

ಯೋಜನೆಗೆ ಚಾಲನೆ ನೀಡಿ, ಆನ್‌ಲೈನ್ ಪೋರ್ಟಲ್‌ ಉದ್ಘಾಟಿಸಿ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೇಜ್ರಿವಾಲ್‌, ಕೊರೊನಾ ಸೋಂಕಿನ ಎರಡನೇ ಅಲೆ, ದೆಹಲಿಯ ಬಹುತೇಕ ಎಲ್ಲ ಕುಟುಂಬಗಳ ಮೇಲೂ ತೀವ್ರ ಪರಿಣಾಮ ಬೀರಿತ್ತು. ಸೋಂಕಿನಿಂದ ಅನೇಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ADVERTISEMENT

‘ಎರಡನೇ ಅಲೆಯಲ್ಲಿ ಹಲವು ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅನೇಕ ಕುಟುಂಬಗಳು, ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದ ಮನೆಯ ಯಜಮಾನನ್ನು ಕಳೆದುಕೊಂಡಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಒಂದು ಜವಾಬ್ದಾರಿಯುತ ಸರ್ಕಾರವಾಗಿ, ನಾವು ಈ ಯೋಜನೆಯನ್ನು ರೂಪಿಸಿದ್ದೇವೆ‘ ಎಂದು ವಿವರಿಸಿದರು.

‘ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿ ಸರ್ಕಾರದಿಂದ ಆರ್ಥಿಕ ನೆರವು ಬಯಸುವವರು ಈಗ ಉದ್ಘಾಟಿಸಿರುವ ಆನ್‌ಲೈನ್ ಪೋರ್ಟೆಲ್‌ನಲ್ಲಿ ತಮ್ಮ ಹೆಸರು ನೋಂದಯಿಸಿಕೊಳ್ಳಬಹುದು. ನಮ್ಮ ಪ್ರತಿನಿಧಿಗಳು, ಅಂಥ ಕುಟುಂಬದವರನ್ನು ಭೇಟಿ ಮಾಡಿ, ಅವರಿಗೆ ಅರ್ಜಿ ನೀಡಿ, ಭರ್ತಿ ಮಾಡಲು ನೆರವಾಗುತ್ತಾರೆ‘ ಎಂದು ಹೇಳಿದರು.

‘ದಾಖಲೆಗಳ ಕೊರತೆ ಮತ್ತಿತರ ಕಾರಣಗಳಿಂದ ಅರ್ಜಿಯನ್ನು ತಿರಸ್ಕರಿಸುವುದಿಲ್ಲ, ಬದಲಿಗೆ ಅವರಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ನೆರವಾಗುತ್ತಾರೆ‘ ಎಂದು ಹೇಳಿದರು. ‘ಸಂತ್ರಸ್ಥ ಕುಟುಂಬದವರಿಗೆ ತ್ವರಿತವಾಗಿ ಆರ್ಥಿಕ ನೆರವು ತಲುಪುವಂತಾಗಬೇಕು ಎಂಬುದು ನಮ್ಮ ಗುರಿಯಾಗಿದೆ‘ ಎಂದು ಕೇಜ್ರಿವಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.