ADVERTISEMENT

ಪಟಾಕಿ ನಿಷೇಧಕ್ಕೆ ದೆಹಲಿ ಸರ್ಕಾರ ನಿರ್ಧಾರ

ಪಿಟಿಐ
Published 11 ಸೆಪ್ಟೆಂಬರ್ 2023, 14:30 IST
Last Updated 11 ಸೆಪ್ಟೆಂಬರ್ 2023, 14:30 IST
   

ನವದೆಹಲಿ : ಎಲ್ಲಾ ರೀತಿಯ ಪಟಾಕಿ ಉತ್ಪಾದನೆ, ಮಾರಾಟ, ಸಂಗ್ರಹ ಮತ್ತು ಬಳಕೆ ಮೇಲೆ ಮತ್ತೆ ನಿಷೇಧ ಹೇರಲು ದೆಹಲಿ ಸರ್ಕಾರ ನಿರ್ಧರಿಸಿದೆ. ಚಳಿಗಾಲದಲ್ಲಿ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಸೋಮವಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕುರಿತಂತೆ ದೆಹಲಿ ಪೊಲೀಸರು ಕಠಿಣ ನಿರ್ದೇಶನಗಳನ್ನು ಹೊರಡಿಸಲಿದ್ದಾರೆ’ ಎಂದರು.

‘ಕಳೆದ ಐದಾರು ವರ್ಷಗಳಿಂದ ದೆಹಲಿಯ ವಾಯುಗುಣಮಟ್ಟ ಸುಧಾರಿಸುತ್ತಿದೆ. ಇನ್ನೂ ಸುಧಾರಿಸಬೇಕಾದ ಅಗತ್ಯವಿದೆ. ಹಾಗಾಗಿ ಈ ವರ್ಷವೂ ಪಟಾಕಿ ಬಳಕೆಗೆ ನಿಷೇಧ ಹೇರುವ ನಿರ್ಧಾರ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

ADVERTISEMENT

ದೆಹಲಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಎಲ್ಲಾ ರೀತಿ ಪಟಾಕಿಗಳಿಗೆ ನಿಷೇಧ ಹೇರುತ್ತಿದೆ.

ಕಳೆದ ವರ್ಷ ಸರ್ಕಾರ, ನಗರದಲ್ಲಿ ದೀಪಾವಳಿಯಲ್ಲಿ ಪಟಾಕಿ ಹಚ್ಚುವವರಿಗೆ ಗರಿಷ್ಠ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ₹200 ದಂಡ ವಿಧಿಸಲಾಗುವುದು. ಪಟಾಕಿ ಸಂಗ್ರಹ ಮತ್ತು ಪೂರೈಕೆ ಮಾಡುವವರಿಗೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ಮತ್ತು ₹5000ವರೆಗೆ ದಂಡ ವಿಧಿಸಲಾಗುವುದು ಎಂದು ಘೋಷಿಸಿತ್ತು.

ದೀಪಾವಳಿಯಲ್ಲಿ ಮಾತ್ರ ನಿಷೇಧ ಏಕೆ: ಬಿಜೆಪಿ ಪ್ರಶ್ನೆ

ದೆಹಲಿ ಸರ್ಕಾರದ ನಿರ್ಧಾರವನ್ನು ರಾಜ್ಯ ಬಿಜೆಪಿ ಖಂಡಿಸಿದ್ದು, ನಗರದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದೆ.

‘ಮಾಲಿನ್ಯಕ್ಕೆ ಪಟಾಕಿಗಳೇ ಮೂಲ ಕಾರಣವಲ್ಲ ಎಂದು ನ್ಯಾಯಾಲಯದಲ್ಲಿ ರುಜುವಾತಾಗಿದೆ ಮತ್ತು ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ. ದೀಪಾವಳಿಗೆ ಮಾತ್ರ ಪಟಾಕಿ ಬಳಕೆಗೆ ನಿಷೇಧ ಏಕೆ. ಜನರು ಈ ನಿಯಮವನ್ನು ಪಾಲನೆ ಮಾಡುವುದಿಲ್ಲ’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಕಪಿಲ್‌ ಮಿಶ್ರಾ ಹೇಳಿದ್ದಾರೆ.

‘ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಮೇಲೆ ನಿರ್ಬಂಧ ಹೇರಲಿ. ಆದರೆ ಹಸಿರು ಪಟಾಕಿ ಬಳಕೆಗೆ ಅನುಮತಿ ಬೇಕು. ದೀಪಾವಳಿ ಕೇವಲ ಹಬ್ಬ ಅಲ್ಲ, ಲಕ್ಷಾಂತರ ಹಿಂದೂಗಳ ಭಾವನೆಗಳೊಂದಿಗೆ ಅದು ಬೆರೆತಿದೆ’ ಎಂದು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್‌ವೀರ್‌ ಸಿಂಗ್‌ ಬಿಧೂರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.