ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಸರ್ಕಾರಕ್ಕೆ ₹2,000 ಕೋಟಿ ನಷ್ಟ

ಸಿಎಜಿ ವರದಿಯಲ್ಲಿ ಉಲ್ಲೇಖ

ಪಿಟಿಐ
Published 25 ಫೆಬ್ರುವರಿ 2025, 14:52 IST
Last Updated 25 ಫೆಬ್ರುವರಿ 2025, 14:52 IST
ವಿರೋಧ ಪಕ್ಷದ ನಾಯಕಿ ಆತಿಶಿ ನೇತೃತ್ವದಲ್ಲಿ ಎಎಪಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ವಿರೋಧ ಪಕ್ಷದ ನಾಯಕಿ ಆತಿಶಿ ನೇತೃತ್ವದಲ್ಲಿ ಎಎಪಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರವು 2021–2022ರಲ್ಲಿ ಜಾರಿಗೊಳಿಸಿದ್ದ ಅಬಕಾರಿ ನೀತಿಯಿಂದಾಗಿ ಸರ್ಕಾರಕ್ಕೆ ಒಟ್ಟಾರೆ ₹2,000 ಕೋಟಿ ನಷ್ಟ ಉಂಟಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.

ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರ್ಕಾರವು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದ ಸಿಎಜಿ ವರದಿಯು, ಅಬಕಾರಿ ನೀತಿಯ ಅನುಷ್ಠಾನ ಪ್ರಕ್ರಿಯೆಯಲ್ಲಿನ ಲೋಪ ಸೇರಿದಂತೆ ನಷ್ಟಕ್ಕೆ ಕಾರಣವಾದ ವಿವಿಧ ಅಂಶಗಳನ್ನು ಪಟ್ಟಿಮಾಡಿದೆ.

ಹಿಂದಿನ ಎಎಪಿ ಸರ್ಕಾರದ ಕಾರ್ಯದಕ್ಷತೆಗೆ ಸಂಬಂಧಿಸಿದ 14 ವರದಿಗಳನ್ನು ಮಂಡಿಸಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ. ಅಬಕಾರಿ ನೀತಿ ಕುರಿತ ಸಿಎಜಿ ವರದಿ ಅದರಲ್ಲಿ ಮೊದಲನೆಯದ್ದು. ಈ ವರದಿಯು, ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಆಗಿರುವ ನಿಯಮಗಳ ಉಲ್ಲಂಘನೆಯನ್ನೂ ಎತ್ತಿತೋರಿಸಿದೆ.

ADVERTISEMENT

ಕಾನೂನು ಪ್ರಕಾರ ಮದ್ಯ ಮಾರಾಟಕ್ಕೆ ಬೇಕಾದ ರೀತಿಯ ಕಟ್ಟಡಗಳು ಇಲ್ಲದ ವಾರ್ಡ್‌ಗಳಲ್ಲಿ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ನಿಗದಿತ ಕಾಲಮಿತಿಯೊಳಗೆ ಅನುಮತಿಯನ್ನು ತೆಗೆದುಕೊಂಡಿಲ್ಲ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₹941.53 ಕೋಟಿ ನಷ್ಟ ಉಂಟಾಗಿದೆ ಎಂಬ ಅಂಶ ವರದಿಯಲ್ಲಿದೆ.

‘ಈ ವಲಯಗಳಿಂದ ಪರವಾನಗಿ ಶುಲ್ಕದ ರೂಪದಲ್ಲಿ ಸಿಗಬೇಕಿದ್ದ ಸುಮಾರು ₹890.15 ಕೋಟಿ ಅಬಕಾರಿ ಇಲಾಖೆಗೆ ನಷ್ಟ ಆಗಿದೆ. ಕೋವಿಡ್‌ ಅವಧಿಯಲ್ಲಿ ಮುಚ್ಚಿದ್ದ ಮಳಿಗೆಗಳಿಗೆ ಪರವಾನಗಿ ಶುಲ್ಕದಲ್ಲಿ ಮನ್ನಾ ನೀಡಿದ್ದರಿಂದ ₹144 ಕೋಟಿ ಆದಾಯ ನಷ್ಟವಾಗಿದೆ’ ಎಂದು ವಿವರಿಸಲಾಗಿದೆ.

ಅಬಕಾರಿ ನೀತಿಯ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಲೆಫ್ಟಿನೆಂಟ್‌ ಗವರ್ನರ್ ವಿ.ಕೆ.ಸಕ್ಸೇನಾ ಅವರು 2022ರ ಜುಲೈನಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಸೇರಿದಂತೆ ಎಎಪಿಯ ಉನ್ನತ ನಾಯಕರು ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಹಲವು ತಿಂಗಳುಗಳನ್ನು ಜೈಲಿನಲ್ಲಿ ಕಳೆದಿದ್ದಾರೆ.

ವರದಿಯಲ್ಲಿರುವ ಇತರ ಅಂಶಗಳು

  • ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡುವಾಗ ಸಾಲ ತೀರಿಸುವ ಶಕ್ತಿ ಹಣಕಾಸು ಹೇಳಿಕೆ ಮತ್ತು ಅಪರಾಧ ಹಿನ್ನೆಲೆಯ ಬಗ್ಗೆ ಸರಿಯಾದ ಪರಿಶೀಲನೆ ನಡೆಸಿಲ್ಲ.

  • ಆದಾಯ ಗಳಿಕೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಸಂಪುಟದ ಒಪ್ಪಿಗೆ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಅವರ ಅಭಿಪ್ರಾಯ ಪಡೆಯದೆಯೇ ತೆಗೆದುಕೊಳ್ಳಲಾಗಿದೆ.

  • ಅಬಕಾರಿ ನೀತಿಯನ್ನು ರಚಿಸಿದ ತಜ್ಞರ ಸಮಿತಿಯ ಶಿಫಾರಸುಗಳನ್ನು ಅಂದಿನ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ನೇತೃತ್ವದ ಸಚಿವರ ಸಮಿತಿಯು ಬದಲಾಯಿಸಿದೆ.

  • ಮದ್ಯದ ಸಗಟು ಮಾರಾಟವನ್ನು ಸರ್ಕಾರಿ ಏಜೆನ್ಸಿಯು ನಿರ್ವಹಿಸಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಆದರೆ ಸಗಟು ಮಾರಾಟವನ್ನು ಖಾಸಗಿ ಸಂಸ್ಥೆಗಳು ವಹಿಸಿಕೊಳ್ಳಬೇಕೆಂದು ಸಚಿವರ ಸಮಿತಿಯು ಶಿಫಾರಸು ಮಾಡಿದೆ.

ಎಎಪಿಯ 21 ಶಾಸಕರು ಅಮಾನತು

ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕಿ ಆತಿಶಿ ಒಳಗೊಂಡಂತೆ ಎಎಪಿಯ 21 ಶಾಸಕರನ್ನು ಮೂರು ದಿನಗಳ ಮಟ್ಟಿಗೆ ದೆಹಲಿ ವಿಧಾನಸಭೆಯ ಕಲಾಪದಿಂದ ಮಂಗಳವಾರ ಅಮಾನತುಗೊಳಿಸಲಾಗಿದೆ.

ದೆಹಲಿ ಲೋಕೋಪಯೋಗಿ ಸಚಿವ ಪರ್ವೇಶ್‌ ವರ್ಮಾ ಅವರು ಶಾಸಕರನ್ನು ಅಮಾನತು ಮಾಡುವಂತೆ ಮಂಡಿಸಿದ ನಿರ್ಣಯವನ್ನು ಸದನದಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಅಮಾನತುಗೊಂಡಿರುವ ಶಾಸಕರು ಫೆ.27 ಮತ್ತು 28ರಂದು ಸದನದ ಕಲಾಪದಲ್ಲಿ ಪಾಲ್ಗೊಳ್ಳುವಂತಿಲ್ಲ.  ಮುಖ್ಯಮಂತ್ರಿ ಕಚೇರಿಯಿಂದ ಬಿ.ಆರ್‌. ಅಂಬೇಡ್ಕರ್‌ ಮತ್ತು ಭಗತ್‌ ಸಿಂಗ್‌ ಅವರ ಭಾವಚಿತ್ರಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಎಎಪಿ ಶಾಸಕರು ಸೋಮವಾರ ಕೂಡಾ ಕಲಾಪಕ್ಕೆ ಅಡ್ಡಿಪಡಿಸಿದರು. ಮಂಗಳವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಆತಿಶಿ ನೇತೃತ್ವದಲ್ಲಿ ಇದೇ ವಿಷಯ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರು.

ಸ್ಪೀಕರ್ ವಿಜೇಂದರ್‌ ಗುಪ್ತಾ ಅವರು ಕಲಾಪ ನಡೆಯಲು ಅವಕಾಶ ನೀಡುವಂತೆ ಮನವಿ ಮಾಡಿದರೂ ಎಎಪಿ ಶಾಸಕರು ಪ್ರತಿಭಟನೆ ಮುಂದುವರಿಸಿದರು. ಇದರಿಂದ ಶಾಸಕರನ್ನು ಅಮಾನತುಗೊಳಿಸಲಾಯಿತು. ಸ್ಪೀಕರ್‌ ಅವರು ಆ ಬಳಿಕ ಕಲಾಪವನ್ನು ಫೆ.27ರ 11 ಗಂಟೆಗೆ ಮುಂದೂಡಿದರು.

ದೆಹಲಿ ವಿಧಾನಸಭೆಯಲ್ಲಿ ಎಎಪಿಯ 22 ಸದಸ್ಯರು ಇದ್ದು ಓಕ್ಲಾ ಕ್ಷೇತ್ರದ ಶಾಸಕ ಅಮಾನತ್‌ ಉಲ್ಲಾ ಖಾನ್‌ ಹೊರತುಪಡಿಸಿ ಇತರ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಖಾನ್‌ ಅವರು ಮಂಗಳವಾರ ಸದನಕ್ಕೆ ಗೈರಾಗಿದ್ದರು. ಅಮಾನತುಗೊಂಡ 21 ಶಾಸಕರು ಆ ಬಳಿಕ ಸದನದ ಆವರಣದಲ್ಲಿ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದರು.

‘ದೆಹಲಿ ಜನರು ಉತ್ತರಿಸಿದ್ದಾರೆ’

‘ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರು ಪ್ರಧಾನಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದಕ್ಕೆ ದೆಹಲಿಯ ಜನರು ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ’ ಎಂದು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಹೇಳಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು ‘ಕೇಜ್ರಿವಾಲ್‌ ಅವರು ಪ್ರಧಾನಿ ಬಗ್ಗೆ ಹಲವು ಸಲ ಅನುಚಿತ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮೋದಿ ಅವರಿಗೆ ದೆಹಲಿಯನ್ನು ಗೆಲ್ಲಲು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದೂ ಹೇಳಿದ್ದರು. ಆದರೆ ದೆಹಲಿಯ ಜನರು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ’ ಎಂದರು.

ತನ್ನ ಅಧಿಕಾರಾವಧಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಎಎಪಿ, ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಆದರೆ ಸಿಎಜಿ ವರದಿಯು ಎಲ್ಲವನ್ನೂ ಬಹಿರಂಗಪಡಿಸಲಿದೆ.
–ಆಶಿಶ್‌ ಸೂದ್, ದೆಹಲಿ ಸಚಿವ
ಅಂಬೇಡ್ಕರ್ ಭಾವಚಿತ್ರ ತೆಗೆಯುವ ಮೂಲಕ ಬಿಜೆಪಿ ತನ್ನ ನಿಜ ಬಣ್ಣವನ್ನು ತೋರಿಸಿದೆ. ಅಂಬೇಡ್ಕರ್‌ ಸ್ಥಾನವನ್ನು ಮೋದಿ ತುಂಬುವರು ಎಂದು ಬಿಜೆಪಿ ನಂಬಿದೆಯೇ?
–ಆತಿಶಿ, ವಿರೋಧ ಪಕ್ಷದ ನಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.