ADVERTISEMENT

32 ವಾರದ ಗರ್ಭಿಣಿಯ ’ಗರ್ಭಪಾತ’ಕ್ಕೆ ಹೈಕೋರ್ಟ್‌ ಅನುಮತಿ

ಭ್ರೂಣದ ಅಸಹ‌ಜ ಬೆಳವಣಿಗೆ; ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರೆ

ಪಿಟಿಐ
Published 15 ಜುಲೈ 2024, 14:53 IST
Last Updated 15 ಜುಲೈ 2024, 14:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭ್ರೂಣದ ಅಸಹಜ ಬೆಳವಣಿಗೆಯಿಂದ 32 ವಾರದ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ದೆಹಲಿ ಹೈಕೋರ್ಟ್‌ ಅನುಮತಿ ನೀಡಿದೆ.

ಅಸಹಜವಾಗಿ ಬೆಳೆದ ಭ್ರೂಣದಿಂದ ಭವಿಷ್ಯದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆ ಎದುರಿಸುವ ಜೊತೆಗೆ ಹುಟ್ಟುವ ಮಗು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಲಿದೆ. ಹೀಗಾಗಿ, ಗರ್ಭಪಾತಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿ ಮಹಿಳೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆ (ಏಮ್ಸ್‌) ವೈದ್ಯರು ಸಲ್ಲಿಸಿದ ವರದಿ ಆಧರಿಸಿ, ಅರ್ಜಿದಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಸಂಜೀವ್‌ ನರುಲ್ಲಾ ಅವರು ಗರ್ಭಪಾತ ಮಾಡಬಹುದು ಎಂದು ಆದೇಶ ನೀಡಿದರು.

ADVERTISEMENT

ನ್ಯಾಯಾಲಯದ ಅಭಿಪ್ರಾಯದಂತೆ, ‘ಪ್ರಸ್ತುತ ಪ್ರಕರಣದಲ್ಲಿ ಭ್ರೂಣದ ಅಸಹಜ ಬೆಳವಣಿಗೆಯಿಂದಾಗಿ ಮಹಿಳೆಗೆ ದೈಹಿಕ, ಮಾನಸಿಕ ಅನಾರೋಗ್ಯದ ಅಪಾಯವಿರುವುದು ಖಚಿತಪಟ್ಟ ಹಿನ್ನೆಲೆಯಲ್ಲಿ ಗರ್ಭಪಾತ ಮಾಡಬಹುದು’ ಎಂದು ಜುಲೈ 13ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.

ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಿದ್ದ ವೇಳೆ ಭ್ರೂಣದ ಅಸಹಜ ಬೆಳವಣಿಗೆ ಕಂಡುಬಂದ ಹಿನ್ನೆಲೆಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಕೋರಿ 31 ವರ್ಷದ ವಿವಾಹಿತ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದ ಏಮ್ಸ್‌ ವೈದ್ಯರು ನೀಡಿದ ವರದಿ ಆಧರಿಸಿ, ಹೈಕೋರ್ಟ್ ತೀರ್ಪು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.