
ನವದೆಹಲಿ: ಭಾರತ–ಯುಎಇ ನಡುವಿನ ಹಸ್ತಾಂತರ ಒಪ್ಪಂದದ ನಿಬಂಧನೆಗಳನ್ನು ಪ್ರಶ್ನಿಸಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ಆರೋಪಿ ಮೈಕೆಲ್ ಜೇಮ್ಸ್ ಸಲ್ಲಿಸಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ(ಇ.ಡಿ) ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
ಮೈಕೆಲ್ ಅರ್ಜಿಯ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿರುವ ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಮನೋಜ್ ಜೈನ್ ಅವರ ಪೀಠವು, ಅರ್ಜಿಯ ವಿಚಾರಣೆಯನ್ನು 2026ರ ಏಪ್ರಿಲ್ 9ಕ್ಕೆ ಮುಂದೂಡಿದೆ.
ಸಂವಿಧಾನದ 17ನೇ ವಿಧಿಯಡಿ 1999ರಲ್ಲಿ ನಡೆದಿರುವ ಒಪ್ಪಂದವನ್ನು ಮೈಕೆಲ್ ಪ್ರಶ್ನಿಸಿದ್ದಾರೆ. ಈ ಒಪ್ಪಂದದ ಅನ್ವಯ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಸ್ತಾಂತರ ಆದ ವ್ಯಕ್ತಿಗಳನ್ನು ನಿರ್ದಿಷ್ಟ ಪ್ರಕರಣ ಮಾತ್ರವಲ್ಲದೇ ಅದಕ್ಕೆ ಸಂಬಂಧಿಸಿದ ಇತರ ಪ್ರಕರಣಗಳಡಿಯೂ ವಿಚಾರಣೆಗೆ ಒಳಪಡಿಸಬಹುದು.
ಇದೇ ಒಪ್ಪಂದದ ಅಡಿಯಲ್ಲಿ ಮೈಕೆಲ್ ಅವರನ್ನು ದುಬೈ 2018ರಲ್ಲಿ ಭಾರತಕ್ಕೆ ಹಸ್ತಾಂತರಿಸಿತ್ತು. ಬಳಿಕ ಅವರನ್ನು ಸಿಬಿಐ ಮತ್ತು ಇ.ಡಿ ಬಂಧಿಸಿದ್ದವು.
‘ಯಾವ ಪ್ರಕರಣದ ಕಾರಣಕ್ಕೆ ಹಸ್ತಾಂತರ ನಡೆದಿದೆಯೋ ಆ ಪ್ರಕರಣ ಕುರಿತು ಮಾತ್ರ ಆರೋಪಿಯನ್ನು ವಿಚಾರಣೆಗೆ ಒಳಪಡಿಸಬೇಕು. ಇತರ ಪ್ರಕರಣಗಳ ಕುರಿತು ವಿಚಾರಣೆ ಮಾಡಬಾರದು’ ಎಂದು ಮೈಕೆಲ್ ಪರ ವಕೀಲರು ವಾದಿಸಿದ್ದಾರೆ.
ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್‌ಗೆ ಖರೀದಿಯಲ್ಲಿ ₹3,600 ಕೋಟಿ ಮೊತ್ತದ ಹಗರಣ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೈಕೆಲ್ ಆರೋಪಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.