ADVERTISEMENT

ದೆಹಲಿಯಲ್ಲಿ ಶೇ.84ರಷ್ಟು ಸೋಂಕಿತರು ಗುಣಮುಖ, ಶೇ.78ರಷ್ಟು ಹಾಸಿಗೆಗಳು ಖಾಲಿ: ಸಚಿವ

ಏಜೆನ್ಸೀಸ್
Published 21 ಜುಲೈ 2020, 10:15 IST
Last Updated 21 ಜುಲೈ 2020, 10:15 IST
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್‌–19 ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ.84ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಮಂಗಳವಾರ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಯ ವರೆಗೆ ಸುಮಾರು1,23,747 ಜನರಿಗೆ ಸೋಂಕು ದೃಢಪಟ್ಟಿದ್ದು ಇದರಲ್ಲಿ 1,04,918 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 3,663 ಸೋಂಕಿತರು ಮೃತಪಟ್ಟಿದ್ದು, 15,166 ಸಕ್ರಿಯ ಪ್ರಕರಣಗಳಿವೆ.

‘ದೆಹಲಿಯಲ್ಲಿ ನಿನ್ನೆ (ಸೋಮವಾರ) 954 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,23,747ಕ್ಕೆ ಏರಿಕೆಯಾಗಿದೆ. ಸೋಮವಾರ ಒಂದೇದಿನ ಒಟ್ಟು 1784 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದು ಹೊಸದಾಗಿ ಸೋಂಕು ಕಾಣಿಸಿಕೊಂಡವರ ಸಂಖ್ಯೆಗಿಂತಲೂ ಹೆಚ್ಚು’ ಎಂದು ಹೇಳಿದ್ದಾರೆ.

ADVERTISEMENT

ಜನರು ಜಾಗೃತರಾಗಿರುವುದೇ ಹೊಸ ಪ್ರಕರಣಗಳು ಇಳಿಕೆಯಾಗಲು ಮುಖ್ಯ ಕಾರಣ ಎಂದಿರುವಜೈನ್‌, ‘ನಾವು ಯಾವುದೇ ಸಂಭವನೀಯತೆಗೆ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಈ ವೈರಸ್ ಹೇಗೆ ವರ್ತಿಸುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ನಮ್ಮ ಲೆಕ್ಕಾಚಾರಗಳು ಯಾವಾಗಬೇಕಾದರೂ ತಲೆಕೆಳಗಾಗಬಹುದು.ಜನರು ಹೆಚ್ಚು ಜಾಗೃತರಾಗುತ್ತಿದ್ದಾರೆ. ಮಾಸ್ಕ್‌ ಧರಿಸದೇ ಓಡಾಡುವವರಿಗೆ ದಂಡ ವಿಧಿಸಲಾಗುತ್ತಿದೆ. ಮಾಸ್ಕ್‌ ಬಳಕೆಯು ವೈರಸ್ ಹರಡುವಿಕೆಯನ್ನು ಶೇ. 80 ರಷ್ಟು ನಿಯಂತ್ರಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, ‘ದೆಹಲಿಯಲ್ಲಿ1,04,918 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಗುಣಮುಖರಾಗುತ್ತಿರುವವರ ಪ್ರಮಾಣ ಇದೀಗ ಶೇ. 84 ಆಗಿದೆ. ಕೋವಿಡ್‌–19 ರೋಗಿಗಳಿಗಾಗಿ ಮೀಸಲಿಟ್ಟಿದ್ದ ಶೇ.22 ರಷ್ಟು ಹಾಸಿಗೆಗಳಲ್ಲಿ ಮಾತ್ರವೇ ರೋಗಿಗಳಿದ್ದಾರೆ. ಅಂದರೆ ಶೇ. 78 ರಷ್ಟು ಹಾಸಿಗೆಗಳು ಖಾಲಿ ಇವೆ’ ಎಂದು ಮಾಹಿತಿ ನೀಡಿದ್ದಾರೆ.

‘ಕೋವಿಡ್ ಸೋಂಕಿತರಿಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಮೀಸಲಿರುವ 15,461 ಹಾಸಿಗೆಗಳಲ್ಲಿ, ಕೇವಲ 3,422ರಲ್ಲಿ ಮಾತ್ರವೇ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದಿದ್ದಾರೆ.

ಕಂಟೈನ್‌ಮೆಂಟ್‌ ವಲಯಗಳ ಬಗ್ಗೆ ಮಾತನಾಡಿದ ಸಚಿವರು, ಕಳೆದ ನಾಲ್ಕು ತಿಂಗಳಿನಿಂದ ರಾಷ್ಟ್ರ ರಾಜಧಾನಿಯ ಹಲವಾರು ಪ್ರದೇಶಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಗುರುತಿಸಲಾಗಿದೆ. ಈ ಬಗ್ಗೆ ದೆಹಲಿ ಸರ್ಕಾರ ಕೇಂದ್ರ ಸರ್ಕಾರದ ಜೊತೆ ಚರ್ಚಿಸಲಿದೆ ಎಂದು ಹೇಳಿದ್ದಾರೆ.

ಸರ್ಕಾರವು ರಾಜ್ಯದಲ್ಲಿ ಡೆಂಗ್ಯೂ ಮತ್ತು ಚಿಕನ್‌ಗುನ್ಯಾ ನಿಯಂತ್ರಣದ ಸಲುವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.