ADVERTISEMENT

ಪ್ರತಿಯೊಂದು ನಿರ್ದೇಶನದ ಉಲ್ಲಂಘನೆ ನ್ಯಾಯಾಂಗ ನಿಂದನೆ ಅಲ್ಲ: ದೆಹಲಿ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 14:32 IST
Last Updated 17 ಆಗಸ್ಟ್ 2025, 14:32 IST
   

ನವದೆಹಲಿ: ‘ತಾನು ಹೊರಡಿಸುವ ಪ್ರತಿಯೊಂದು ನಿರ್ದೇಶನದ ಉಲ್ಲಂಘನೆ ನ್ಯಾಯಾಂಗ ನಿಂದನೆ ಎನಿಸುವುದಿಲ್ಲ’ ಎಂಬ ಮಹತ್ವದ ಆದೇಶವನ್ನು ದೆಹಲಿ ಹೈಕೋರ್ಟ್‌ ನೀಡಿದೆ.

ಉತ್ತರಾಖಂಡ ಕೇಡರ್‌ನ ಐಎಫ್‌ಎಸ್‌ ಅಧಿಕಾರಿ ಸಂಜೀವ್‌ ಚತುರ್ವೇದಿ ಅವರಿಗೆ ಗುಪ್ತಚರ ವಿಭಾಗದ (ಐ.ಬಿ) ವರದಿ ಸಲ್ಲಿಸುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್‌ ಮತ್ತು ಹರೀಶ್ ವೈದ್ಯನಾಥನ್‌ ಅವರ ಪೀಠ ಈ ಆದೇಶ ಹೊರಡಿಸಿದೆ.

ಹೈಕೋರ್ಟ್‌ ವಿಭಾಗೀಯ ಪೀಠವು ಗುಪ್ತಚರ ವಿಭಾಗದ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ (ಸಿಪಿಐಒ) ನೀಡಿದ ನಿರ್ದೇಶನವನ್ನು ಪದೇ ಪದೇ ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಚತುರ್ವೇದಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು.

ADVERTISEMENT

ಐಎಫ್‌ಎಸ್‌ ಅಧಿಕಾರಿಗೆ ಸಂಬಂಧಿಸಿದ ಐ.ಬಿ ವರದಿ ಸೇರಿದಂತೆ ಸಂಬಂಧಿತ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ವಿಭಾಗೀಯ ಪೀಠವು ಆದೇಶಿಸಿತ್ತು. ಆದರೆ ಸಿಪಿಐಒ ಅವರು ದಾಖಲೆಗಳನ್ನು ಹಾಜರುಪಡಿಸಿರಲಿಲ್ಲ. 

‘ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸುವುದು ಗಂಭೀರ ವಿಷಯವಾಗಿದ್ದು, ಅದನ್ನು ಸಾಮಾನ್ಯ ಎಂಬಂತೆ ಬಳಸಬಾರದು. ಮೇಲ್ಮನವಿಯ ವಿಚಾರಣೆ ವೇಳೆ ಸಂಬಂಧಪಟ್ಟವರಿಗೆ ದಾಖಲೆಗಳನ್ನು ಹಾಜರುಪಡಿಸುವಂತೆ ಒತ್ತಾಯಿಸಲು ಅಧಿಕಾರ ಪೀಠಕ್ಕೆ ಇದೆ. ಆದಾಗ್ಯೂ, ನ್ಯಾಯಪೀಠ ಹೊರಡಿಸಿದ ಪ್ರತಿಯೊಂದು ನಿರ್ದೇಶನವನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸುವ ಅಗತ್ಯವಿಲ್ಲ’ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ನ್ಯಾಯಾಲಯದ ನಿರ್ದೇಶನ ಉಲ್ಲಂಘಿಸಿದ ವ್ಯಕ್ತಿಯ ಹೆಸರನ್ನು ಕೂಡಾ ಪ್ರತಿವಾದಿ ಒದಗಿಸಿಲ್ಲ. ಆದ್ದರಿಂದ ಒಂದು ಕಚೇರಿಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲು ಆಗುವುದಿಲ್ಲ ಎಂದೂ ಆದೇಶದಲ್ಲಿ ಹೇಳಿದೆ. 

ವಿಭಾಗೀಯ ಪೀಠವು ಮೊದಲು 2023ರ ಜುಲೈ 27ರಂದು ಮತ್ತು ಆ ಬಳಿಕ 2024ರ ಆಗಸ್ಟ್ 21 ರಂದು ಐ.ಬಿಗೆ ದಾಖಲೆಗಳನ್ನು ಒದಗಿಸಬೇಕೆಂದು ಆದೇಶಿಸಿತ್ತು. 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.