ನವದೆಹಲಿ: ಬಾಲಕಿಗೆ ಆಗಿರುವ ಗಾಯಗಳ ಕುರಿತು ವೈದ್ಯಕೀಯ ವರದಿಯಲ್ಲಿ ಉಲ್ಲೇಖವಿಲ್ಲ ಎಂದ ಮಾತ್ರಕ್ಕೆ ತನ್ನ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಬಗ್ಗೆ ಆಕೆ ನೀಡಿರುವ ‘ಸ್ಪಷ್ಟವಾದ ಹೇಳಿಕೆ’ಯನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಬಾಲಕಿಯ ಮೇಲೆ ಹಲ್ಲೆ ಹಾಗೂ ಅಕ್ರಮವಾಗಿ ಬಂಧನದಲ್ಲಿಟ್ಟಿರುವ ಆರೋಪಗಳಿಗೆ ಸಂಬಂಧಿಸಿ ವ್ಯಕ್ತಿ ಹಾಗೂ ಆತನ ಪತ್ನಿ ವಿರುದ್ಧ 2016ರಲ್ಲಿ ದಾಖಲಾಗಿರುವ ಪ್ರಕರಣ ಕುರಿತು ಹೊಸದಾಗಿ ಆರೋಪ ನಿಗದಿ ಮಾಡಿ, ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಗಿರೀಶ ಕಠಪಾಲಿಯಾ ಅವರು ಇದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ಸಂತ್ರಸ್ತ ಬಾಲಕಿ, ಆರೋಪಿಯ ಕಂಪನಿಯಲ್ಲಿ ಸ್ವಾಗತಗಾರ್ತಿಯಾಗಿ ಕೆಲಸ ಮಾಡುತ್ತಿದ್ದಳು. ವ್ಯಕ್ತಿಯ ವಿರುದ್ಧ ವಿಚಾರಣಾ ನ್ಯಾಯಾಲಯವು, ಅತ್ಯಾಚಾರ ಹಾಗೂ ಅಸ್ವಾಭಾವಿಕ ಲೈಂಗಿಕಕ್ರಿಯೆ ಆರೋಪಗಳನ್ನು ಹೊರಿಸಿತ್ತು. ಆದರೆ, ಹಲ್ಲೆ ಮತ್ತು ಅಕ್ರಮ ಬಂಧನದಲ್ಲಿಟ್ಟ ಆರೋಪಗಳಿಂದ ಆ ವ್ಯಕ್ತಿ ಹಾಗೂ ಆತನ ಪತ್ನಿಯನ್ನು ಖುಲಾಸೆಗೊಳಿಸಿ ಆದೇಶಿಸಿತ್ತು.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಾಲಕಿಯು ಹೈಕೋರ್ಟ್ ಮೆಟ್ಟಿಲೇರಿದ್ದಳು.
ವಿಚಾರಣೆ ವೇಳೆ, ‘ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಬಾಲಕಿಗೆ ಗಾಯಗಳಾಗಿರುವ ಕುರಿತು ಉಲ್ಲೇಖ ಇರದಿದ್ದರೂ, ತನ್ನನ್ನು ಹೊಡೆದಿರುವ ಕುರಿತು ಆಕೆ ನೀಡಿರುವ ಹೇಳಿಕೆಯನ್ನು ತಳ್ಳಿಹಾಕಲಾಗುವುದಿಲ್ಲ’ ಎಂದು ನ್ಯಾಯಪೀಠ ಜುಲೈ 18ರಂದು ನೀಡಿರುವ ಆದೇಶದಲ್ಲಿ ತಿಳಿಸಿದೆ.
ಸಿಆರ್‌ಪಿಸಿ ಸೆಕ್ಷನ್ 164ರಡಿ ಮ್ಯಾಜಿಸ್ಟ್ರೇಟ್ ಮುಂದೆ ಬಾಲಕಿಯು ಹೇಳಿಕೆ ದಾಖಲಿಸಿದ್ದಾಳೆ. ‘ನನ್ನ ಹೊಟ್ಟೆಗೆ ಒದೆಯಲಾಗಿದೆ ಹಾಗೂ ತಲೆಯನ್ನು ಗೋಡೆಗೆ ಜಜ್ಜಲಾಗಿದೆ. ಆದರೆ, ವೈದ್ಯಕೀಯ ವರದಿಯಲ್ಲಿ ಈ ಕುರಿತು ಉಲ್ಲೇಖವಿಲ್ಲ ಎಂಬುದಾಗಿ ಬಾಲಕಿ ಹೇಳಿಕೆ ನೀಡಿದ್ದಾಳೆ’ ಎಂದು ನ್ಯಾಯಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.