ನವದೆಹಲಿ: ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಎಪ್ರಿಲ್ 1ರಿಂದ ಶಾಲೆಗಳಲ್ಲಿ ಭೌತಿಕ ತರಗತಿಗಳು ಸಂಪೂರ್ಣವಾಗಿ ಪುನರಾರಂಭಗೊಳ್ಳಲಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ರಾಷ್ಟ್ರ ರಾಜಧಾನಿಯಲ್ಲಿ ಹೇರಿರುವ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದೆ.
ಮಾಸ್ಕ್ ಧರಿಸದವರ ಮೇಲಿನ ದಂಡವನ್ನು ₹500ಕ್ಕೆ ಇಳಿಕೆ ಮಾಡಲಾಗಿದೆ.
ಈ ನಡುವೆ ಜನರು ಕೋವಿಡ್ ನಿಯಮ ಪಾಲಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಅಲ್ಲದೆ ಸರ್ಕಾರವು ಸೂಕ್ಷ್ಮ ನಿಗಾ ಇಡುವುದಾಗಿ ತಿಳಿಸಿದ್ದಾರೆ.
ಒಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಫೆಬ್ರುವರಿ 7ರಿಂದ ಹಂತ ಹಂತವಾಗಿ ಶಾಲೆ, ಕಾಲೇಜುಗಳನ್ನು ಆರಂಭಿಸಲು ಡಿಡಿಎಂಎ ಸಲಹೆ ನೀಡಿತ್ತು. ಜಿಮ್, ಈಜುಕೊಳ ಹಾಗೂ ಸ್ಪಾಗಳನ್ನು ತೆರೆಯಲು ಅನುಮತಿ ನೀಡಿದೆ. ಕಚೇರಿಗಳಲ್ಲಿ ಶೇ 100ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.