ADVERTISEMENT

ದೆಹಲಿ-ಮೀರತ್ ನಮೋ ಭಾರತ್ ರೈಲ್ವೆ ಕಾರಿಡಾರ್: ಮೊದಲ ದಿನ 1 ಲಕ್ಷ ಪ್ರಯಾಣಿಕರ ಓಡಾಟ

ಪಿಟಿಐ
Published 24 ಫೆಬ್ರುವರಿ 2026, 2:56 IST
Last Updated 24 ಫೆಬ್ರುವರಿ 2026, 2:56 IST
<div class="paragraphs"><p>ರೈಲಿನಲ್ಲಿ ಪ್ರಯಾಣಿಸುವ ವೇಳೆ ಪ್ರಧಾನಿ ಮೋದಿ ಅವರು ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.</p></div>

ರೈಲಿನಲ್ಲಿ ಪ್ರಯಾಣಿಸುವ ವೇಳೆ ಪ್ರಧಾನಿ ಮೋದಿ ಅವರು ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 82 ಕಿ.ಮೀ ಉದ್ದದ ದೆಹಲಿ-ಮೀರತ್ ನಮೋ ಭಾರತ್‌ ರೈಲ್ವೆ ಕಾರಿಡಾರ್‌ ಅನ್ನು ಉದ್ಘಾಟಿಸಿದ್ದಾರೆ. ಈ ಮಾರ್ಗದಲ್ಲಿ ರೈಲು ಸೇವೆ ಆರಂಭವಾದ ಮೊದಲ ದಿನವೇ 1 ಲಕ್ಷ ಪ್ರಯಾಣಿಕರು ಓಡಾಟ ನಡೆಸಿದ್ದಾರೆ.

ನಗರಗಳ ನಡುವಿನ ಸಂಪರ್ಕ ಜಾಲ ಹೆಚ್ಚಿಸುವ ಉದ್ದೇಶದಿಂದ ನಮೋ ಭಾರತ್‌ ರೈಲ್ವೆ ಕಾರಿಡಾರ್‌ ಯೋಜನೆ ಜಾರಿಗೊಳಿಸಲಾಗಿದೆ. ದೆಹಲಿ-ಮೀರತ್ ಕಾರಿಡಾರ್‌ನಲ್ಲಿ ಇಲ್ಲಿಯವರೆಗೆ ದಾಖಲಾದ ಅತ್ಯಧಿಕ ಪ್ರಯಾಣಿಕರ ಸಂಖ್ಯೆಯಾಗಿದೆ ಎಂದು ರಾಷ್ಟ್ರೀಯ ರಾಜಧಾನಿ ವಲಯ ಸಾರಿಗೆ ನಿಗಮ (ಎನ್‌ಸಿಆರ್‌ಟಿಸಿ) ತಿಳಿಸಿದೆ.

ADVERTISEMENT

ದೆಹಲಿ-ಮೀರತ್ ಮಾರ್ಗದಲ್ಲಿ ಕೊನೆಯ ರೈಲು ರಾತ್ರಿ 10 ಗಂಟೆಗೆ ಹೊರಡಲಿದ್ದು, ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುವ ನಿರೀಕ್ಷೆಯಿದೆ ಎಂದು ಎನ್‌ಸಿಆರ್‌ಟಿಸಿ ಹೇಳಿದೆ.

ದೆಹಲಿ-ಮೀರತ್ ಕಾರಿಡಾರ್‌ನಲ್ಲಿ ರೈಲುಗಳು ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುತ್ತವೆ. ದೆಹಲಿ, ಸಾಹಿಬಾಬಾದ್, ಗಾಜಿಯಾಬಾದ್, ಮೋದಿನಗರ ಮತ್ತು ಮೀರತ್‌ನಂತಹ ಪ್ರಮುಖ ನಗರ ಕೇಂದ್ರಗಳ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಹುಟ್ಟುಹಬ್ಬ ಆಚರಣೆ, ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಿಗಾಗಿ ನಮೋ ಭಾರತ್‌ ರೈಲು ಮತ್ತು ನಿಲ್ದಾಣಗಳಲ್ಲಿ ಅವಕಾಶ ನೀಡಲಾಗಿದೆ.

ಹೊಸ ನೀತಿಯಡಿ, ಯಾವುದೇ ವ್ಯಕ್ತಿಗಳು, ಕಾರ್ಯಕ್ರಮ ಆಯೋಜಕರು ಮತ್ತು ಫೋಟೋಗ್ರಾಫಿ ಅಥವಾ ಇತರ ಕಂಪನಿಗಳು ನಿಲುಗಡೆಯಾಗಿರುವ ಅಥವಾ ಚಲಿಸುತ್ತಿರುವ ನಮೋ ಭಾರತ್‌ ಬೋಗಿಗಳನ್ನು ಬುಕ್ ಮಾ‌ಡಬಹುದು ಎಂದು ಎನ್‌ಸಿಆರ್‌ಟಿಸಿ ತಿಳಿಸಿದೆ.

ಫೋಟೋಗ್ರಾಫಿ ಮತ್ತು ಸಣ್ಣ ಕಾರ್ಯಕ್ರಮಗಳಿಗಾಗಿ ನಿರ್ಮಿಸಿರುವ ನಮೋ ಭಾರತ್‌ನ ಆಧುನಿಕ ಮತ್ತು ಅಂತರರಾಷ್ಟ್ರೀಯ ವಿನ್ಯಾಸದ ಬೋಗಿಗಳು ವಿಶೇಷ ಅನುಭವವನ್ನು ನೀಡಲಿದೆ ಎಂದು ಎನ್‌ಸಿಆರ್‌ಟಿಸಿ ತಿಳಿಸಿದೆ.

ಮಾರ್ಗಸೂಚಿಯಂತೆ ಸರಳ ಅಲಂಕಾರದೊಂದಿಗೆ ಬೆಳಿಗ್ಗೆ 6ರಿಂದ ರಾತ್ರಿ 11 ಗಂಟೆವರೆಗೆ ಆಚರಣೆ ಮಾಡಿಕೊಳ್ಳಬಹುದು. ಆನಂದ್‌ವಿಹಾರ್, ಗಾಜಿಯಾಬಾದ್‌ ಮತ್ತು ಮೀರತ್ ಉತ್ತರದಲ್ಲಿ ಇಂಥ ರೈಲು ನಿಲ್ದಾಣಗಳು ಇರುವುದರಿಂದ ದೆಹಲಿ–ಮೀರತ್‌ ಕಾರಿಡಾರ್‌ ನಿವಾಸಿಗಳಿಗೆ ಪ್ರಯೋಜನವಾಗಲಿದೆ ಎಂದು ಎನ್‌ಸಿಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಮೋಭಾರತ್‌ ರೈಲು ಮತ್ತು ನಿಲ್ದಾಣಗಳಲ್ಲಿ ಚಲನಚಿತ್ರ, ಸಾಕ್ಷ್ಯಚಿತ್ರ, ಜಾಹೀರಾತು ಮತ್ತು ಇನ್ನಿತರ ಚಿತ್ರೀಕರಣಕ್ಕೆ ಸೂಕ್ತ ನಿಯಮಗಳನ್ನು ರೂಪಿಸಲಾಗಿದೆ. ಅಲ್ಪಾವಧಿಯ ಬಳಕೆಗಾಗಿ ಸ್ಫರ್ಧಾತ್ಮಕ ದರದಲ್ಲಿ ಬುಕ್ ಮಾಡಬಹುದು ಎಂದು ಎನ್‌ಸಿಆರ್‌ಟಿಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.