
ನವದೆಹಲಿ: ಇ–ಮೇಲ್ ಮೂಲಕ ಬಾಂಬ್ ದಾಳಿಯ ಬೆದರಿಕೆ ಬಂದ ಬೆನ್ನಲ್ಲೇ, ದೆಹಲಿ ಮೆಟ್ರೊ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಸಚಿವಾಲಯ, ಕೆಂಪುಕೋಟೆ, ಎರಡು ಶಾಲೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಬಾಂಬ್ ಸ್ಫೋಟಿಸಲಾಗುವುದು ಎಂದು ಇತ್ತೀಚೆಗೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದ ಬಳಿಕ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ.
‘ಬಾಂಬ್ ಬೆದರಿಕೆ ಒಡ್ಡಿದ ದುಷ್ಕರ್ಮಿಗಳ ಐ.ಪಿ. ವಿಳಾಸವನ್ನು ಪತ್ತೆಹಚ್ಚಲು ಸೈಬರ್ ತಂಡದ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅಪರಾಧಿಗಳು ವರ್ಚುವಲ್ ಪ್ರೈವೆಟ್ ನೆಟ್‌ವರ್ಕ್ (ವಿಪಿಎನ್) ಬಳಸಿ, ಬೆದರಿಕೆ ಇ–ಮೇಲ್ ಕಳುಹಿಸುವ ಮೂಲಕ ಪೊಲೀಸರ ದಾರಿ ತಪ್ಪಿಸುತ್ತಾರೆ. ಆದರೂ, ತಂಡದ ತಜ್ಞರು ತಪ್ಪಿತಸ್ಥರನ್ನು ಬಂಧಿಸಲಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಇಡೀ ನಗರದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಎಲ್ಲಾ ಮೆಟ್ರೊ ನಿಲ್ದಾಣಗಳ ಮುಂದೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದ್ದು, ವಿಧ್ವಂಸದ ಕೃತ್ಯಗಳ ಆತಂಕ ಇರುವುದರಿಂದ ದಿಢೀರ್ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
‘ಕೆಂಪುಕೋಟೆ, ದೆಹಲಿ ಸಚಿವಾಲಯ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನಪಡೆಗಳನ್ನು ನಿಯೋಜಿಸಲಾಗಿದೆ. ಹರಿಯಾಣ ಹಾಗೂ ಉತ್ತರಪ್ರದೇಶ ವ್ಯಾಪ್ತಿಗೆ ಬರುವ ಮೆಟ್ರೊ ನಿಲ್ದಾಣಗಳಲ್ಲಿ ಸೂಕ್ತ ಭದ್ರತೆ ಕೈಗೊಳ್ಳಲು ಸೂಚನೆ ನೀಡಲಾಗಿದೆ’ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.