ADVERTISEMENT

ದೆಹಲಿ: ಕೋವಿಡ್‌ ದೃಢಪಟ್ಟ ಶೇ 84 ಜನರಲ್ಲಿ ಓಮೈಕ್ರಾನ್‌–ಸತ್ಯೇಂದರ್‌ ಜೈನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2022, 11:01 IST
Last Updated 3 ಜನವರಿ 2022, 11:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಎರಡು ದಿನಗಳಲ್ಲಿ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಪೈಕಿ ಶೇಕಡ 84ರಷ್ಟು ಪ್ರಕರಣಗಳಲ್ಲಿ ಓಮೈಕ್ರಾನ್‌ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಸಂಬಂಧ ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ಮಾಹಿತಿ ನೀಡಿದ್ದಾರೆ.

ಡಿಸೆಂಬರ್‌ 30 ಮತ್ತು 31ರಂದು ನಡೆಸಲಾಗಿರುವ ವೈರಾಣುವಿನ ಜಿನೋಮ್‌ ಸೀಕ್ವೆನ್ಸಿಂಗ್‌ ವರದಿಯ ಪ್ರಕಾರ, ಕೋವಿಡ್‌ ದೃಢಪಟ್ಟ ಮಾದರಿಗಳ ಪೈಕಿ ಶೇಕಡ 84ರಷ್ಟು ಮಾದರಿಗಳಲ್ಲಿ ಓಮೈಕ್ರಾನ್‌ ತಳಿ ಇರುವುದು ತಿಳಿದು ಬಂದಿದೆ.

ದೇಶದಲ್ಲಿ ಈಗಾಗಲೇ 23 ರಾಷ್ಟ್ರಗಳಿಗೆ ಓಮೈಕ್ರಾನ್‌ ಸೋಂಕು ವ್ಯಾಪಿಸಿದ್ದು, ಮಹಾರಾಷ್ಟ್ರದಲ್ಲಿ 510 ಪ್ರಕರಣಗಳು ಹಾಗೂ ದೆಹಲಿಯಲ್ಲಿ 351 ಪ್ರಕರಣಗಳು ವರದಿಯಾಗಿವೆ.

ADVERTISEMENT

ಇತ್ತೀಚೆಗೆ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿರುವ 187 ಮಾದರಿಗಳ ಪೈಕಿ 152ರಲ್ಲಿ ಓಮೈಕ್ರಾನ್‌ ಪತ್ತೆಯಾಗಿದೆ. ಓಮೈಕ್ರಾನ್‌ನಿಂದಾಗಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ ಎಂದು ಸತ್ಯೇಂದರ್‌ ಜೈನ್‌ ಹೇಳಿದ್ದಾರೆ.

ಭಾನುವಾರ ದೆಹಲಿಯಲ್ಲಿ ಕೋವಿಡ್‌ ದೃಢಪಟ್ಟ 3,194 ಪ್ರಕರಣಗಳು ದಾಖಲಾಗಿದ್ದು, ಕೋವಿಡ್‌ ದೃಢ ಪ್ರಮಾಣ ಶೇಕಡ 4.59ರಷ್ಟಿದೆ.

'ಇವತ್ತು ಸುಮಾರು 4,000 ಕೋವಿಡ್‌ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದ್ದು, ಪಾಸಿಟಿವಿಟಿ ದರ ಶೇಕಡ 6.5ಕ್ಕೆ ಏರಿಕೆಯಾಗಬಹುದು. ತಜ್ಞರ ಪ್ರಕಾರ, ವಾರದೊಳಗೆ ದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರ ಮಟ್ಟವನ್ನು ತಲುಪಲಿದೆ' ಎಂದು ಹೇಳಿದ್ದಾರೆ.

ಆದರೆ, ಓಮೈಕ್ರಾನ್‌ ಕುರಿತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದು, ಸರ್ಕಾರಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಇಲ್ಲ ಎಂದಿದ್ದಾರೆ. ಸದ್ಯ ದೆಹಲಿಯಲ್ಲಿ 200 ಮಂದಿ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಓಮೈಕ್ರಾನ್‌ ಸೋಂಕು ದೇಶದ ಹೊರಗಿನಿಂದ ಬಂದಿರುವುದೆಂದು ಎಲ್ಲರಿಗೂ ತಿಳಿದಿದೆ. ವಿಮಾನಗಳ ಹಾರಾಟವನ್ನು ರದ್ದು ಪಡಿಸುವಂತೆ ದೆಹಲಿ ಸರ್ಕಾರವು ಹಲವು ಬಾರಿ ಕೋರಿದೆ, ಆದರೆ ಕೇಂದ್ರ ಸರ್ಕಾರವು ಅದನ್ನು ತಿರಸ್ಕರಿಸಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.