
ಬಂಧನ (ಸಾಂದರ್ಭಿಕ ಚಿತ್ರ)
ನವದೆಹಲಿ: ಅಮಾನ್ಯಗೊಂಡಿರುವ ₹500 ಮತ್ತು ₹1000ರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲು ಇಲ್ಲಿನ ಅಶೋಕ ವಿಹಾರದಲ್ಲಿ ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
‘ಆರ್‌ಬಿಐನಲ್ಲಿ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಜನರಿಗೆ ವಂಚಿಸಿ, ₹3.59 ಕೋಟಿಗೂ ಹೆಚ್ಚಿನ ಮೊತ್ತದ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಆರೋಪಿಗಳ ಕುರಿತು ಬುಧವಾರ ಸುಳಿವು ಸಿಕ್ಕಿತ್ತು. ಶಾಲಿಮಾರ್ ಬಾಗ್ ಮೆಟ್ರೊ ನಿಲ್ದಾಣದ 4ನೇ ದ್ವಾರದಲ್ಲಿ ಗುರುವಾರ ಅವರನ್ನು ಬಂಧಿಸಲಾಯಿತು’ ಎಂದು ಹೇಳಿದ್ದಾರೆ.
‘ಬಂಧಿತ ಆರೋಪಿಗಳಾದ ರೋಹಿಣಿಯ ಹರ್ಷ್ (22) ಮತ್ತು ತೇಕ್ ಚಂದ್ ಠಾಕೂರ್ (39), ಬ್ರಿಜ್ ಪುರಿಯ ಲಕ್ಷ್ಯ (28) ಹಾಗೂ ಫಿರೋಜ್ ಶಾ ರಸ್ತೆಯ ವಿಪಿನ್ ಕುಮಾರ್ (38), ಆಶಿಶ್ ಮತ್ತು ತರುಣ್ ಎಂಬ ಇಬ್ಬರು ಯುವಕರ ಸೂಚನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು’ ಎಂದು ಮಾಹಿತಿ ನೀಡಿದ್ಧಾರೆ.
‘ಕೆಲಸ ಮುಗಿಸಿದರೆ ಭಾರಿ ಪ್ರಮಾಣದ ಕಮಿಷನ್ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು’ ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ‘ಕಾರ್ಯಾಚರಣೆಯಲ್ಲಿ ಆರೋಪಿಗಳು ಬಳಸಿದ್ದ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.