ADVERTISEMENT

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸ್ವಾಮಿ ಚೈತನ್ಯಾನಂದ ವಿರುದ್ಧ ಪ್ರಕರಣ

ಪಿಟಿಐ
Published 24 ಸೆಪ್ಟೆಂಬರ್ 2025, 5:21 IST
Last Updated 24 ಸೆಪ್ಟೆಂಬರ್ 2025, 5:21 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ಇಲ್ಲಿನ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ವ್ಯವಸ್ಥಾಪಕ, ಸ್ವಯಂಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ ಸಾರಥಿ ಅವರ ವಿರುದ್ಧ ಹಲವು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರ ತೀವ್ರ ಕಣ್ಗಾವಲಿನ ನಡುವೆಯೂ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಆಗಸ್ಟ್ 4ರಂದು ವಸಂತ್ ಕುಂಜ್‌ನ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯು ಆಡಳಿತ ಮಂಡಳಿಯ ಸದಸ್ಯನಾಗಿದ್ದಾನೆ.

ADVERTISEMENT

ವಿಚಾರಣೆಯ ಸಮಯದಲ್ಲಿ, ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿಯಲ್ಲಿ ಪಿಜಿಡಿಎಂ (ಪಿಜಿ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್) ವ್ಯಾಸಂಗ ಮಾಡುತ್ತಿರುವ 32 ಮಹಿಳಾ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಅದರಲ್ಲಿ 17 ಮಂದಿ ಚೈತನ್ಯಾನಂದ ಅವಾಚ್ಯ ಶಬ್ದಗಳನ್ನು ಬಳಸಿದ್ದು, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. ಅಲ್ಲದೆ, ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.

ಕೆಲವು ಅಧ್ಯಾಪಕರು ಮತ್ತು ಆಡಳಿತಾಧಿಕಾರಿಗಳು ಸಹ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, 16 ಮಂದಿ ಸಂತ್ರಸ್ತ ವಿದ್ಯಾರ್ಥಿನಿಯರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.

ವಿದ್ಯಾಸಂಸ್ಥೆಯ ನೆಲಮಹಡಿಯಲ್ಲಿ ಚೈತನ್ಯಾನಂದ ಬಳಸುತ್ತಿದ್ದ ನಕಲಿ ನಂಬರ್ ಪ್ಲೇಟ್‌ನ ವೊಲ್ವೊ ಕಾರನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದು, ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.