ನವದೆಹಲಿ: ಇಬ್ಬರು ಸಹೋದರರ ಅಪಹರಣ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಡ್ರಗ್ ದಂಧೆಯನ್ನು ಭೇದಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 52 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್ 29 ರಂದು ದೆಹಲಿಯ ಸನ್‌ಲೈಟ್ ಕಾಲೋನಿಯ ನಿವಾಸಿ ಅಟೋಕಾ ಎಂಬಾತ ನೆಬ್ ಸರೈ ಪೊಲೀಸ್ ಠಾಣೆಯಲ್ಲಿ ತನ್ನ ಸಹೋದರರಾದ ವಿವಿಕಾ ಯೆಪ್ತೊ ಮತ್ತು ಬುವಿಟೊನನ್ನು ಅಪರಿಚಿತರು ಅಪಹರಣ ಮಾಡಿರುವುದಾಗಿ ದೂರು ನೀಡಿದ್ದರು. ಇವರು ಕೆಲವು ದಿನಗಳ ಹಿಂದಷ್ಟೆ ನಾಗಾಲ್ಯಾಂಡ್‌ನಿಂದ ದೆಹಲಿಗೆ ಬಂದು ನೆಲೆಸಿದ್ದರು.
ನನ್ನ ಸಹೋದರರನ್ನು ಬಿಡುಗಡೆ ಮಾಡಲು ಅಪಹರಣಕಾರರು ₹22 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಅಟೋಕಾ ಪೊಲೀಸರಿಗೆ ತಿಳಿಸಿದ್ದರು.
‘ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳು ಬೈಕ್, ಟ್ಯಾಕ್ಸಿ ಡ್ರೈವರ್‌ನಂತೆ ವೇಷ ಧರಿಸಿ ತನಿಖೆ ಆರಂಭಿಸಿದ್ದರು. ದೂರುದಾರ ಅಟೋಕಾ ಕಡೆಯಿಂದ ಹಣ ನೀಡುವುದಾಗಿ ಹೇಳಿ ರಾಜ್‌ಪುರ ಖುರ್ದ್‌ನಲ್ಲಿರುವ ನಿಗದಿತ ಸ್ಥಳಕ್ಕೆ ಬರುವಂತೆ ಅಪಹರಣಕಾರರಿಗೆ ಸಂದೇಶ ರವಾನಿಸಲಾಗಿತ್ತು. ಸ್ಥಳಕ್ಕೆ ಬಂದ ಅಪಹರಣಕಾರರನ್ನು ಕೂಡಲೇ ಬಂಧಿಸಲಾಯಿತು’ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅಂಕಿತ್ ಚೌಹಾಣ್ ತಿಳಿಸಿದ್ದಾರೆ.
‘ವಿವಿಕಾ, ಬುವಿಟೊ, ಹಿಟೊಕಾ ಆಯೆಮಿ, ಅಭಿಷೇಕ್ ಕುಮಾರ್, ಅಮಿತ್ ಪಾಠಕ್ ಮತ್ತು ಕರಣ್ ಕುಮಾರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಆಗ ಆರೋಪಿಗಳು ಡ್ರಗ್ ದಂಧೆಯಲ್ಲಿ ಸಕ್ರಿಯವಾಗಿ ತೊಡಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಚೌಹಾಣ್ ಹೇಳಿದ್ದಾರೆ.
ದೂರುದಾರ ಅಟೋಕಾ ಸಹೋದರರು ಅಸ್ಸಾಂನ ಗುವಾಹಟಿಯಿಂದ ಗಾಂಜಾವನ್ನು ಖರೀದಿಸಿ ದೆಹಲಿಗೆ ತಂದು ಮಾರಾಟ ಮಾಡುತ್ತಿದ್ದರು. ಸದ್ಯ ಆರೋಪಿಗಳು ತಂಗಿದ್ದ ಸ್ಥಳದಲ್ಲಿ ತಪಾಸಣೆ ನಡೆಸಿದಾಗ ಮೂರು ಟ್ರಾಲಿ ಬ್ಯಾಗ್‌ಗಳಲ್ಲಿ ಬಚ್ಚಿಟ್ಟಿದ್ದ 52 ಕೆ.ಜಿ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.