ADVERTISEMENT

ಉತ್ತರ ಭಾರತದಲ್ಲಿ ಮುಂದುವರಿದ ಮಳೆ ಅಬ್ಬರ: ಯಮುನಾ ನದಿ ಪ್ರವಾಹ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2023, 3:18 IST
Last Updated 17 ಜುಲೈ 2023, 3:18 IST
   

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಮಳೆ ಪ್ರಮುಣ ಮುಂದುವರಿದಿದ್ದು, ಯಮುನಾ ನದಿ ಪ್ರವಾಹ ಏರಿಕೆಯಾಗಿದೆ.

ದೆಹಲಿಯಲ್ಲಿ ಭಾರಿ ಮಳೆ ಸುರಿದ ಕಾರಣ ಯಮುನಾ ನದಿಯಲ್ಲಿ ನೀರಿನ ಮಟ್ಟ ಮತ್ತೆ ಹೆಚ್ಚಳವಾಗಿದೆ. ಭಾರಿ ಮಳೆಯಿಂದಾಗಿ ರಸ್ತೆ, ವಸತಿ ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.

ಪ್ರವಾಹದಿಂದಾಗಿ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದಿದ್ದು, ಆಗ್ರಾದಲ್ಲಿ ತಾಜ್ ಮಹಲ್ ಕಡೆಗೆ ಹೋಗುವ ಯಮುನಾ ಕಿನಾರಾ ರಸ್ತೆ ಜಲಾವೃತಗೊಂಡಿದೆ. ಆಗ್ರಾದಲ್ಲಿ ಯಮುನಾ ನದಿ ನೀರಿನ ಮಟ್ಟ 495.80 ಅಡಿಗಳಿಗೆ ಏರಿಕೆಯಾಗಿದೆ.

ADVERTISEMENT

ಮಥುರಾದ ಗೋಕುಲ್ ಬ್ಯಾರೇಜ್‌ನಿಂದ ಏಳು ಗೇಟ್‌ಗಳ ಮೂಲಕ 1,24,302 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿರುವುದು ನೀರಿನ ಮಟ್ಟ ಏರಿಕೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

'ಯಮುನಾ ನದಿ ನೀರಿನ ಮಟ್ಟವು ಕಡಿಮೆ ಪ್ರವಾಹದ ಮಟ್ಟವನ್ನು ದಾಟಿರುವುದರಿಂದ ನಾವು ಎಚ್ಚರಿಕೆ ವಹಿಸಿದ್ದೇವೆ. ಮುನ್ನೆಚ್ಚರಿಕೆ ಕ್ರಮವಾಗಿ ಮುಳುಗು ತಜ್ಞರು ಕರ್ತವ್ಯದಲ್ಲಿ ಇರಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ’ ಎಂದು ಆಗ್ರಾದ ಜಿಲ್ಲಾಧಿಕಾರಿ ನವನೀತ್ ಚಾಹಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.