ADVERTISEMENT

Delhi Blast: ಜನವರಿಯಲ್ಲೇ ಸಂಚು ಶುರು; ಕೆಂಪುಕೋಟೆ ಬಳಿ ಹಲವು ಬಾರಿ ಸಂಚಾರ

ಮೊಬೈಲ್‌ ಗೋಪುರ ಲೊಕೇಷನ್‌ ದತ್ತಾಂಶದಿಂದ ಪತ್ತೆ

ಪಿಟಿಐ
Published 12 ನವೆಂಬರ್ 2025, 23:14 IST
Last Updated 12 ನವೆಂಬರ್ 2025, 23:14 IST
.
.   

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟಕ್ಕೆ ಈ ವರ್ಷದ ಜನವರಿಯಿಂದಲೇ ಸಂಚು ಆರಂಭವಾಗಿದೆ. ಈಗ ಬಂಧಿಸಲಾಗಿರುವ ಆರೋಪಿಗಳ ಪೈಕಿ ಡಾ. ಮುಜಮ್ಮಿಲ್‌ ಗನಿ ಈ ವರ್ಷದ ಜನವರಿ ಮೊದಲ ವಾರದಲ್ಲಿ ಹಲವು ಬಾರಿ ಕೆಂಪುಕೋಟೆ ಬಳಿ ಸುತ್ತಾಡಿದ್ದ ಎಂಬುದು ಮೊಬೈಲ್‌ ಗೋಪುರದ ಲೊಕೇಷನ್‌ ದತ್ತಾಂಶ ವಿಶ್ಲೇಷಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸ್ಫೋಟಗೊಂಡ ಕಾರನ್ನು ಓಡಿಸುತ್ತಿದ್ದ ಎನ್ನಲಾಗಿರುವ ಅಲ್‌–ಫಲಾಹ್‌ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಉಮರ್‌ ನಬಿ ಜತೆಗೆ ಕೆಂಪುಕೋಟೆ ಪ್ರದೇಶದ ಸುತ್ತಮುತ್ತ ಈತ ಓಡಾಡಿದ್ದಾನೆ. ಈ ಭಾಗದಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಜನದಟ್ಟಣೆ ತಿಳಿದುಕೊಳ್ಳಲು ಹಲವು ಬಾರಿ ಭೇಟಿ ನೀಡಿರಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಜಮ್ಮಿಲ್‌ ಚಲನವಲನಗಳನ್ನು ಟವರ್‌ ಲೊಕೇಷನ್‌ ದತ್ತಾಂಶ ಮತ್ತು ಹತ್ತಿರದ ಪ್ರದೇಶಗಳ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳು ದೃಢೀಕರಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

‘ಗಣರಾಜ್ಯೋತ್ಸವದ ದಿನವಾದ ಜನವರಿ 26ರಂದು ಐತಿಹಾಸಿಕ ಸ್ಮಾರಕವನ್ನು ಗುರಿಯಾಗಿಸಿ ದಾಳಿ ನಡೆಸಲು ಅವರು ದೊಡ್ಡ ಪಿತೂರಿ ನಡೆಸಿರುವ ಶಂಕೆಯಿದೆ. ಆದರೆ ಆ ಸಂದರ್ಭದಲ್ಲಿ ಅಲ್ಲಿದ್ದ ಬಿಗಿ ಭದ್ರತೆ ಮತ್ತು ತೀವ್ರ ಗಸ್ತು ವ್ಯವಸ್ಥೆಯಿಂದಾಗಿ ಅವರ ಯೋಜನೆ ಜಾರಿಗೊಳಿಸುವುದು ಸಾಧ್ಯವಾಗಲಿಲ್ಲ’ ಎಂದು ಅವರು ತಿಳಿಸಿದ್ದಾರೆ.

ನಿಷೇಧಿತ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಮತ್ತು ಅನ್ಸಾರ್‌ ಗಜ್ವತ್‌–ಉಲ್–ಹಿಂದ್‌ ಸಂಘಟನೆಗಳ ಜತೆಗೆ ನಂಟು ಹೊಂದಿದ್ದ ಉಗ್ರರ ಜಾಲವನ್ನು ಭೇದಿಸಿದ್ದ ಪೊಲೀಸರು, ಮೂವರು ವೈದ್ಯರು ಸೇರಿದಂತೆ ಎಂಟು ಮಂದಿ ಶಂಕಿತರನ್ನು ಸೋಮವಾರ ಬಂಧಿಸಿದ್ದರು.

ಈ ಕಾರ್ಯಾಚರಣೆ ವೇಳೆ 2,900 ಕೆ.ಜಿ ಅಮೋನಿಯಂ ನೈಟ್ರೇಟ್‌, ಪೊಟ್ಯಾಷಿಯಂ ಕ್ಲೋರೇಟ್‌, ಸಲ್ಫರ್‌ ಸೇರಿದಂತೆ ಅಪಾರ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಹಾಗೂ ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಕ್ಕೆ ಪಡೆದಿದ್ದರು.  

ಅದರ ಬೆನ್ನಲ್ಲೇ ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ ಸಂಭವಿಸಿ 12 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. 

ಮೌಲ್ವಿ ವಶಕ್ಕೆ: ತನಿಖೆಯ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬುಧವಾರ ಹರಿಯಾಣದ ಮೇವಾತ್‌ನಲ್ಲಿ ಮೌಲ್ವಿ ಇಶ್ತಿಯಾಕ್‌ ಅನ್ನು ವಶಕ್ಕೆ ಪಡೆದು, ಶ್ರೀನಗರಕ್ಕೆ ಕರೆತಂದಿದ್ದಾರೆ. ಫರೀದಾಬಾದ್‌ನ ಅಲ್‌–ಫಲಾಹ್‌ ವಿಶ್ವವಿದ್ಯಾಲಯ ಸಂಕೀರ್ಣದ ಬಾಡಿಗೆ ಮನೆಯಲ್ಲಿ ಆತ ವಾಸಿಸುತ್ತಿದ್ದ.

ಮೌಲ್ವಿ ಮನೆಯಿಂದ ಪೊಲೀಸರು ಸೋಮವಾರ 2,500 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದರು. ಮೌಲ್ವಿಯನ್ನು ಬಂಧಿಸುವ ಸಾಧ್ಯತೆಯಿದೆ. ಹೀಗಾದರೆ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಒಂಬತ್ತಕ್ಕೇರಲಿದೆ.

ಡಾ. ಉಮರ್‌ ನಬಿ ಮತ್ತು ಮುಜುಮ್ಮಿಲ್‌ ಗನಿ ಈ ಸ್ಫೋಟಕಗಳನ್ನು ಮೌಲ್ವಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.  

40 ಮಾದರಿಗಳ ಸಂಗ್ರಹ

ಕಾರು ಸ್ಫೋಟ ಸಂಭವಿಸಿದ ಸ್ಥಳದಿಂದ ಸುಮಾರು 40 ಮಾದರಿಗಳನ್ನು ಸಂಗ್ರಹಿಸಿರುವ ವಿಧಿವಿಜ್ಞಾನ ತಜ್ಞರು ಪರಿಶೀಲಿಸುತ್ತಿದ್ದಾರೆ. ಇದರಲ್ಲಿ ಎರಡು ಕಾರ್ಟ್ರಿಡ್ಜ್‌ಗಳು, ಸಜೀವ ಮದ್ದುಗುಂಡುಗಳು ಮತ್ತು ಎರಡು ವಿಭಿನ್ನ ರೀತಿಯ ಸ್ಫೋಟಕ ಮಾದರಿಗಳು ಸೇರಿವೆ. 

ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಲ್‌) ಪ್ರಾಥಮಿಕ ವಿಶ್ಲೇಷಣೆ ಪ್ರಕಾರ, ಸ್ಫೋಟಕ ಮಾದರಿಗಳಲ್ಲಿ ಒಂದು ಅಮೋನಿಯಂ ನೈಟ್ರೇಟ್‌ ಆಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ಸ್ಫೋಟಕ ಮಾದರಿಯು ಅಮೋನಿಯಂ ನೈಟ್ರೇಟ್‌ಗಿಂತ ಹೆಚ್ಚು ಶಕ್ತಿಶಾಲಿ ಆಗಿದ್ದಂತೆ ಕಾಣುತ್ತಿದೆ. ಎಫ್‌ಎಸ್‌ಎಲ್‌ ವರದಿಯ ಬಳಿಕ ಅದರ ನಿಖರವಾದ ಸಂಯೋಜನೆ ದೃಢಪಡುತ್ತದೆ ಎಂದು ಅವರು ವಿವರಿಸಿದ್ದಾರೆ.

ಫರೀದಾಬಾದ್‌ನಲ್ಲಿ ಅಲ್‌–ಫಲಾಹ್‌ ವಿಶ್ವವಿದ್ಯಾಲಯದ ಡಾ. ಮುಜಮ್ಮಿಲ್‌ ಗನಿ ಮತ್ತು ಡಾ. ಶಾಹೀನ್‌ ಸಹೀದ್‌ ಅನ್ನು ಪೊಲೀಸರು ಸೋಮವಾರ ಬಂಧಿಸಿದ್ದರು. ಅವರ ಬಳಿ 360 ಕೆ.ಜಿ ಅಮೋನಿಯಂ ನೈಟ್ರೇಟ್‌ ಪತ್ತೆಯಾಗಿತ್ತು. ಸ್ಫೋಟಕಗಳ ಸ್ವರೂಪ ಮತ್ತು ಅವುಗಳನ್ನು ಹೇಗೆ ಸ್ಫೋಟದಲ್ಲಿ ಬಳಸಲಾಗಿದೆ ಎಂಬುದು ಉನ್ನತ ಮಟ್ಟದ ತನಿಖೆಯಿಂದ ಗೊತ್ತಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಕಾರ್ ಡೀಲರ್ ವಶಕ್ಕೆ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಫರೀದಾಬಾದ್ ಮೂಲದ ಕಾರ್ ಡೀಲರ್‌ ಒಬ್ಬರನ್ನು ವಿಶೇಷ ದಳ ವಶಕ್ಕೆ ಪಡೆದಿದೆ. ಫರೀದಾಬಾದ್ ಪೊಲೀಸರ ನೆರವಿನೊಂದಿಗೆ ಅವರನ್ನು ಸೋಮವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ.

ಫರೀದಾಬಾದ್ ಸೆಕ್ಟರ್ 37ರ ರೋಯಲ್ ಕಾರ್ ಪ್ಲಾಜಾದ ಮಾಲೀಕ ಅಮಿತ್ ಬಂಧಿತ ವ್ಯಕ್ತಿ.

ಡಿ. 6ರಂದು ಪ್ರಬಲ ಸ್ಫೋಟದ ಪಿತೂರಿ

ಬಾಬರಿ ಮಸೀದಿ ಧ್ವಂಸದ ವಾರ್ಷಿಕ ದಿನವಾದ ಡಿಸೆಂಬರ್‌ 6ರಂದು ಪ್ರಬಲ ಸ್ಫೋಟ ನಡೆಸಲು ಡಾ. ಉಮರ್‌ ನಬಿ ಯೋಜಿಸಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಬಂಧಿಸಲಾಗಿರುವ ಎಂಟು ಜನರ ತೀವ್ರ ವಿಚಾರಣೆ ಹಾಗೂ ಅವರ ಕುಟುಂಬದವರು, ಸ್ನೇಹಿತರು ಮತ್ತು ನೆರೆಯವರ ವಿಚಾರಣೆಯಿಂದ ಈ ಮಾಹಿತಿ ದೊರೆತಿದೆ ಎಂದು ಅವರು ವಿವರಿಸಿದ್ದಾರೆ.

ಡಾ. ಮುಜಮ್ಮಿಲ್‌ ಗನಿ ಬಂಧನ ಮತ್ತು ಅಪಾರ ಪ್ರಮಾಣದ ಅಮೋನಿಯಂ ನೈಟ್ರೇಟ್‌ ಸ್ಫೋಟಕ ಪತ್ತೆಯಾಗಿ ದ್ದರಿಂದ ಉಮರ್‌ ಭೀತಿಗೆ ಒಳಗಾಗಿದ್ದ ಎಂದು ಹೇಳಿದ್ದಾರೆ.

ಒಂಟಿಯಾಗಿದ್ದ ಉಮರ್‌ ಉತ್ತಮ ಶೈಕ್ಷಣಿಕ ದಾಖಲೆ ಹೊಂದಿದ್ದ. ಆತನು ಗನಿ ಜತೆಗೂಡಿ 2021ರಲ್ಲಿ ಟರ್ಕಿ ಪ್ರವಾಸ ಕೈಗೊಂಡಿದ್ದ. ಅದು ಆತನ ಜೀವನದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಪ್ರವಾಸದ ವೇಳೆ ಇಬ್ಬರೂ, ನಿಷೇಧಿತ ಜೆಇಎಂನ ಭೂಗತ ಕಾರ್ಯಕರ್ತರನ್ನು ಭೇಟಿಯಾಗಿದ್ದರು ಎಂಬುದು ಗೊತ್ತಾಗಿದೆ.

ಟರ್ಕಿ ಪ್ರವಾಸದ ಬಳಿಕ ಉಮರ್‌, ಗನಿ ಜತೆಗೆ ಅಮೋನಿಯಂ ನೈಟ್ರೇಟ್‌, ಪೊಟ್ಯಾಷಿಯಂ ನೈಟ್ರೇಟ್‌, ಸಲ್ಫರ್‌ ಸೇರಿದಂತೆ ವಿವಿಧ ಸ್ಫೋಟಕಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದ. ಇವುಗಳನ್ನು ಅಲ್‌–ಫಲಾಹ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌ ಮತ್ತು ಸುತ್ತಮುತ್ತ ಸಂಗ್ರಹಿಸಲು ಮುಂದಾಗಿದ್ದ ಎಂದು ಅವರು ವಿವರಿಸಿದ್ದಾರೆ.  

‘ಡಿಸೆಂಬರ್‌ ಭಯೋತ್ಪಾದನಾ ಯೋಜನೆಯ ಬಗ್ಗೆ ಉಮರ್‌ ತನ್ನ ಸಹಚರರಿಗೆ ಮಾಹಿತಿ ನೀಡಿದ್ದ. ತಾನು ಖರೀದಿಸಿದ್ದ ಹುಂಡೈ ಐ20 ಕಾರಿನಲ್ಲಿ ಸ್ಫೋಟಕಗಳನ್ನು ಇರಿಸಲು ಸಿದ್ಧತೆ ನಡೆಸಿದ್ದ. ಇದಕ್ಕಾಗಿ ಇಂಟರ್‌ನೆಟ್‌ನಿಂದ ಮಾಹಿತಿ ಸಂಗ್ರಹಿಸಿ, ವಾಹನ ಆಧಾರಿತ ಸ್ಫೋಟಕ ಸಾಧನ (ವಿಬಿಐಇಡಿ) ಅಳವಡಿಸಲು ಯೋಜಿಸಿದ್ದ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಅಕ್ಟೋಬರ್‌ 26ರಂದು ಆತ ಕಾಶ್ಮೀರಕ್ಕೆ ಹೋಗಿ, ಸ್ನೇಹಿತರು ಮತ್ತು ಸಂಬಂಧಿಕರ ಜತೆ ಕೆಲ ದಿನಗಳು ಕಳೆದಿದ್ದ. ಅಲ್ಲಿಂದ ಫರೀದಾಬಾದ್‌ಗೆ ಹಿಂದಿರುಗುವ ಮುನ್ನ, ತಾನು ಮೂರು ತಿಂಗಳು ಲಭ್ಯವಿರುವುದಿಲ್ಲ ಎಂದು ಸ್ನೇಹಿತರು ಮತ್ತು ಸಂಬಂಧಿಕರಿಗೆ ತಿಳಿಸಿದ್ದನು’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಯೋಜನೆಯ ಪ್ರಕಾರ ಕಾರಿಗೆ ವಿಬಿಐಇಡಿ ಅಳವಡಿಸಿ, ಕೆಲ ಕಾಲ ಕಣ್ಮರೆಯಾಗುವ ಉದ್ದೇಶವನ್ನು ಉಮರ್‌ ಹೊಂದಿದ್ದ. ಆದರೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕಾರ್ಯಾಚರಣೆಯಿಂದ ಆತಂಕಗೊಂಡಿದ್ದ ಎಂದು ಅವರು ತಿಳಿಸಿದ್ದಾರೆ.

ಭಯೋತ್ಪಾದಕ ಕೃತ್ಯ: ಸರ್ಕಾರ
ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ನಡೆದ ಕಾರು ಸ್ಫೋಟವನ್ನು ‘ಭಯೋತ್ಪಾದಕ ಕೃತ್ಯ’ ಎಂದು ಕರೆದಿರುವ ಕೇಂದ್ರ ಸರ್ಕಾರ, ಈ ಪ್ರಕರಣವನ್ನು ತನಿಖಾ ಸಂಸ್ಥೆಗಳು ಅತ್ಯಂತ ತ್ವರಿತ ಮತ್ತು ವೃತ್ತಿಪರತೆಯಿಂದ ನಿಭಾಯಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ವಿಳಂಬವಿಲ್ಲದೆ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣು ನೀತಿಗೆ ಭಾರತ ಬದ್ಧವಾಗಿದೆ ಎಂದು ಪುನರುಚ್ಚರಿಸಲಾಯಿತು. ಈ ಘಟನೆಯಲ್ಲಿ ಮೃತಪಟ್ಟವರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು. ಅಲ್ಲದೆ ಜೀವಹಾನಿ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.

‘ಆಕಸ್ಮಿಕವೂ ಆಗಿರಬಹುದು’

‘ಕೆಂಪುಕೋಟೆ ಬಳಿ ಸೋಮವಾರ ಸಂಭವಿಸಿದ ಭಾರಿ ಸ್ಫೋಟವು ಆಕಸ್ಮಿಕವೂ ಆಗಿರಬಹುದು. ಈ ಸ್ಫೋಟವನ್ನು ಶಂಕಿತರು ಯೋಜಿಸದೆಯೂ ಇರಬಹುದು. ಫರೀದಾಬಾದ್‌ನಲ್ಲಿ ವೈಟ್‌ಕಾಲರ್‌ ಭಯೋತ್ಪಾದಕರ ವಿರುದ್ಧ ನಡೆದ ದಾಳಿಯಿಂದ ಆತಂಕಗೊಂಡು ಉಮರ್‌ ತನ್ನ ಬಳಿಯಿದ್ದ ಸ್ಫೋಟಕಗಳನ್ನು ಸಾಗಿಸುತ್ತಿದ್ದಾಗ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿರಬಹುದು’ ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ. 

‘ಯಾವ ಸಾಧ್ಯತೆಯನ್ನೂ ನಿರ್ಲಕ್ಷಿಸದೆ, ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ನಿರ್ಣಾಯಕ ಪುರಾವೆಗಳ ಶೋಧಕ್ಕೆ ಎಲ್ಲ ವಿಧಾನಗಳನ್ನೂ ಬಳಸಲಾಗುತ್ತಿದೆ’ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಈ ಪ್ರಕರಣದ ತನಿಖೆ ವಹಿಸಿಕೊಂಡಿದ್ದು, ವಿಶೇಷ ತಂಡ ರಚಿಸಿ ಸ್ಥಳ ಪರಿಶೀಲನೆ ನಡೆಸಿದೆ.

ಉಮರ್‌ ನಬಿಗೆ ಹುಂಡೈ ಐ20 ಕಾರು ಖರೀದಿಸಲು ನೆರವಾಗಿದ್ದ ‘ರಾಯಲ್‌ ಕಾರ್‌ ಪ್ಲಾಜಾ’ದ ಮಾಲೀಕ ಅಮಿತ್‌ ಅವರನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಫರೀದಾಬಾದ್‌ನಲ್ಲಿನ ಅವರ ಕಚೇರಿಯಲ್ಲಿ ಶೋಧವನ್ನೂ ನಡೆಸಿದ್ದಾರೆ.

ಮತ್ತೊಂದು ಕಾರು ಪತ್ತೆ
ಸ್ಫೋಟಗೊಂಡ ಕಾರನ್ನು ಓಡಿಸುತ್ತಿದ್ದ ಡಾ. ಉಮರ್ ನಬಿ ಮಾಲೀಕತ್ವದ ಕೆಂಪು ಬಣ್ಣದ ‘ಫೋರ್ಡ್‌ ಎಕೋಸ್ಪೋರ್ಟ್‌’ ಕಾರನ್ನು ತೀವ್ರ ಶೋಧದ ಬಳಿಕ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಫರೀದಾಬಾದ್‌ ಬಳಿ ಕಾರು ಪತ್ತೆಯಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಹುಂಡೈ ಐ20 ಕಾರಿನ ಜತೆಗೆ ‘ಫೋರ್ಡ್‌ ಎಕೋಸ್ಪೋರ್ಟ್‌’ ಕಾರನ್ನೂ ಸ್ಫೋಟಕ್ಕೆ ಬಳಸುವ ಸಂಚನ್ನು ಉಮರ್‌ ಮಾಡಿರಬಹುದು ಎಂಬ ಶಂಕೆಯಿದೆ. ಈ ದಿಸೆಯಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ವಿಳಾಸದ ಬಳಿ ತಪಾಸಣೆ

ಉಮರ್‌ ಕಾರಿನ ನೋಂದಣಿಗೆ ನವ ಸೀಲಂಪುರ ಬಳಿಯ ನಿವಾಸದ ವಿಳಾಸವನ್ನು ನೀಡಿದ್ದ. ಇದು ಗೊತ್ತಾದ ಕೂಡಲೇ ಪೊಲೀಸರು ಈ ವಿಳಾಸದ ಬಳಿ ಹೋಗಿ ತಪಾಸಣೆ ನಡೆಸಿದರು. ಕಾರು ಖರೀದಿಗೆ ಉಮರ್‌ ನಕಲಿ ವಿಳಾಸ ನೀಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಳಾಸದಲ್ಲಿ ಮದರಸ ನಡೆಸುತ್ತಿರುವ ಇಮಾಮ್‌ ಮೊಹಮ್ಮದ್‌ ತಸವ್ವೂರ್‌ ಅವರನ್ನು ಪೊಲೀಸರು ವಿಚಾರಣೆ ನಡೆಸಿದರು. ‘ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆಗಳನ್ನು ನಾನು ಇಲ್ಲಿ ಗಮನಿಸಿಲ್ಲ’ ಎಂದು ಇಮಾಮ್‌ ಈ ವೇಳೆ ಪೊಲೀಸರಿಗೆ ತಿಳಿಸಿದರು. 

‘ಪೊಲೀಸರು ನನ್ನ ಮೊಬೈಲ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಅವರ ತನಿಖೆಗೆ ನಾವು ಸಹಕರಿಸುತ್ತೇವೆ. ಈ ದುರ್ಘಟನೆಗೆ ಕಾರಣರಾದವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಲಿ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ಹಲವೆಡೆ ಶೋಧ
ಕಾರು ಸ್ಫೋಟ ಪ್ರಕರಣದ ಬೆನ್ನುಬಿದ್ದಿರುವ ಪೊಲೀಸರು, ನಿಷೇಧಿತ ಜಮಾತ್‌–ಎ–ಇಸ್ಲಾಮಿ ಸಂಘಟನೆಯೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದ 300ಕ್ಕೂ ಹೆಚ್ಚು ಸ್ಥಳಗಳಲ್ಲಿ ಬುಧವಾರ ಶೋಧ ನಡೆಸಿದರು. ಕುಲ್ಗಾಂ, ಪುಲ್ವಾಮಾ, ಶೋಪಿಯಾನ್‌, ಬಾರಾಮುಲ್ಲಾ, ಗಾಂಧೇರಬಲ್‌ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.