ನವದೆಹಲಿ: ‘ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ಸೇರುವ ಮಗುವಿನ ವಯಸ್ಸು 6 ವರ್ಷ ಮೀರಿರಬೇಕು. ಈ ನಿಯಮ 2026–27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ’ ಎಂದು ದೆಹಲಿ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಹೇಳಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ವಯ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಇಲಾಖೆ ಹೇಳಿದೆ.
ಈ ಕುರಿತಂತೆ ಇಲಾಖೆ ಸುತ್ತೋಲೆ ಹೊರಡಿಸಿದ್ದು. ಇದರಲ್ಲಿ ನರ್ಸರಿ ಹಂತವನ್ನೂ ಒಳಗೊಂಡಂತೆ ಕನಿಷ್ಠ ವಯೋಮಿತಿಯನ್ನು ಇಲಾಖೆ ನಮೂದಿಸಿದೆ. ನರ್ಸರಿ ಮತ್ತು ಕಿಂಡರ್ ಗಾರ್ಟನ್, ನಂತರ ಒಂದನೇ ತರಗತಿ ಸೇರಿದೆ. ಇವುಗಳಿಗೆ ಶಿಶುವಿಹಾರಕ್ಕೆ 3 ವರ್ಷದ ಮೇಲ್ಪಟ್ಟು, ಎಲ್‌ಕೆಜಿ 4 ವರ್ಷದ ಮೇಲ್ಪಟ್ಟು ಮತ್ತು ಯುಕೆಜಿ 5 ವರ್ಷದ ಮೇಲ್ಪಟ್ಟ ಮಗುವನ್ನು ದಾಖಲಿಸಬೇಕು.
ಪರಿಷ್ಕೃತ ಪಟ್ಟಿಯಲ್ಲಿ, ಕನಿಷ್ಠ ಮತ್ತು ಗರಿಷ್ಠ ವಯೋಮಿತಿಯನ್ನೂ (ಮಾರ್ಚ್ 31ಕ್ಕೆ ಅನ್ವಯಿಸುವಂತೆ) ನೀಡಲಾಗಿದೆ. ನರ್ಸರಿಗೆ (ಬಾಲವಾಟಿಕಾ 1/ ಶಾಲಾಪೂರ್ವ 1) ಕನಿಷ್ಠ 3 ವರ್ಷ ಹಾಗೂ ಗರಿಷ್ಠ 4 ವರ್ಷವಾಗಿರಬೇಕು. ಎಲ್‌ಕೆಜಿ (ಬಾಲವಾಟಿಕಾ 2/ ಶಾಲಾ ಪೂರ್ವ 2) 4 ವರ್ಷದಿಂದ 5 ವರ್ಷದೊಳಗಿನವರಾಗಿರಬೇಕು. ಯುಕೆಜಿ (ಬಾಲವಾಟಿಕಾ 3/ ಶಾಲಾ ಪೂರ್ವ 3) 5 ವರ್ಷದಿಂದ 6 ವರ್ಷದೊಳಗಿನವರಾಗಿರಬೇಕು. ನಂತರ ತರಗತಿ 1ಕ್ಕೆ ಕನಿಷ್ಠ 6 ವರ್ಷ ಹಾಗೂ ಗರಿಷ್ಠ 7 ವರ್ಷದವರಾಗಿರಬೇಕು ಎಂದು ಹೇಳಲಾಗಿದೆ.
ಇವುಗಳಲ್ಲಿ ಕನಿಷ್ಠ ಹಾಗೂ ಗರಿಷ್ಠ ಮಿತಿಗೆ ಒಂದು ತಿಂಗಳ ವಿನಾಯಿತಿ ನೀಡಲಾಗಿದೆ. ಆದರೆ 2025–26ನೇ ಸಾಲಿನಲ್ಲಿ ದಾಖಲಾಗಿರುವ ವಿದ್ಯಾರ್ಥಿಗೆ ಇದು ಅನ್ವಯಿಸದು. ಹಾಗೆಯೇ ಎಲ್‌ಕೆಜಿ ಮತ್ತು ಯುಕೆಜಿ ವಯೋಮಿತಿಯು 2027–28ನೇ ಸಾಲಿನಿಂದ ಅನ್ವಯವಾಗಲಿದೆ. ಹಾಲಿ ಇರುವ ವ್ಯವಸ್ಥೆಯಲ್ಲೇ ಸದ್ಯ ಇರುವ ನರ್ಸರಿ, ಕಿಂಡರ್ ಗಾರ್ಟನ್ ಮತ್ತು ಒಂದನೇ ತರಗತಿ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ತೇರ್ಗಡೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.