ADVERTISEMENT

ದೆಹಲಿಯ 50 ಶಾಲೆಗಳಿಗೆ ಬಾಂಬ್‌‌ ಬೆದರಿಕೆ ಇ–ಮೇಲ್; ಶೋಧ ಕಾರ್ಯ ಆರಂಭ

ಪಿಟಿಐ
Published 20 ಆಗಸ್ಟ್ 2025, 5:34 IST
Last Updated 20 ಆಗಸ್ಟ್ 2025, 5:34 IST
   

ನವ ದೆಹಲಿ : ನಗರದ 50 ಶಾಲೆಗಳಿಗೆ ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದ್ದು ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಬಾಂಬ್‌ಗಾಗಿ ಶೋಧವನ್ನು ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿರುವ ರಾಹುಲ್ ಮಾಡೆಲ್ ಸ್ಕೂಲ್, ದ್ವಾರಕಾದ ಮ್ಯಾಕ್ಸ್‌ಫೋರ್ಟ್ ಶಾಲೆ, ಮಾಳವೀಯ ನಗರದ ಎಸ್‌ಕೆವಿ ಹಾಗೂ ಪ್ರಸಾದ್ ನಗರದ ಆಂಧ್ರ ಶಾಲೆಗಳಿಗೆ ಬೆದರಿಕೆ ಇ–ಮೇಲ್‌ ಬಂದಿದೆ. ನಗರದ ಒಟ್ಟು 50 ಶಾಲೆಗಳಿಗೆ ಅಪರಿಚಿತರಿಂದ ಬಾಂಬ್‌ಗಳ‌ ಬೆದರಿಕೆ ಬಂದಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. 

ಮಾಲ್ವಿಯಾ ನಗರದ ಎಸ್‌ಕೆವಿ ಮತ್ತು ಪ್ರಸಾದ್ ನಗರದ ಆಂಧ್ರ ಶಾಲೆಗೆ ಕ್ರಮವಾಗಿ ಬೆಳಿಗ್ಗೆ 7.40 ಮತ್ತು 7.42 ಕ್ಕೆ ಬಾಂಬ್ ಬೆದರಿಕೆಯ ಬಗ್ಗೆ ಮಾಹಿತಿ ಬಂದಿದೆ ಎಂದು ದೆಹಲಿಯ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ADVERTISEMENT

ಆಗಸ್ಟ್ 18 ರಂದು ನಗರದಾದ್ಯಂತ 32 ಶಾಲೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು. ಇದಾದ ಎರಡು ದಿನಗಳಲ್ಲಿ ಹೊಸ ಬೆದರಿಕೆಗಳು ಬಂದಿವೆ. ಮಾಹಿತಿಯನ್ನು ತಿಳಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಭೇಟಿ ನೀಡಿ ಶೋಧಕಾರ್ಯ ಆರಂಭಿಸಿದ್ದಾರೆ. ಇದು ಹುಸಿ ಬೆದರಿಕೆ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.