ADVERTISEMENT

ದೆಹಲಿ ಹಿಂಸಾಚಾರ: ಶಾಸಕರ ತುರ್ತುಸಭೆ ಕರೆದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2020, 4:55 IST
Last Updated 25 ಫೆಬ್ರುವರಿ 2020, 4:55 IST
ದೆಹಲಿಯ ಚಾಂದ್ ಬಾಗ್‌ನಲ್ಲಿ ಸೋಮವಾರ ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಹೊತ್ತಿ ಉರಿದ ಕಾರು
ದೆಹಲಿಯ ಚಾಂದ್ ಬಾಗ್‌ನಲ್ಲಿ ಸೋಮವಾರ ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಹೊತ್ತಿ ಉರಿದ ಕಾರು   

ನವದೆಹಲಿ:ಈಶಾನ್ಯ ದೆಹಲಿಯ ಕೆಲವೆಡೆ ಮಂಗಳವಾರವೂ ಹೊಸದಾಗಿ ಕಲ್ಲುತೂರಾಟ ಪ್ರಕರಣಗಳು ವರದಿಯಾಗಿವೆ. ಉದ್ವಿಗ್ನ ಪರಿಸ್ಥಿತಿ ತಹಬದಿಗೆ ಬಂದಿಲ್ಲ. ತಕ್ಷಣ ಹಿಂಸಾಚಾರ ನಿಲ್ಲಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

‘ನಗರದ ಕೆಲ ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ನನಗೆ ಆತಂಕವಾಗಿದೆ. ನಾವೆಲ್ಲರೂ ಸೇರಿ ದೆಹಲಿಯಲ್ಲಿ ಶಾಂತಿ ಮರುಸ್ಥಾಪನೆಗೆ ಪ್ರಯತ್ನಿಸಬೇಕು. ಹಿಂಸಾಚಾರವನ್ನು ತಕ್ಷಣ ನಿಲ್ಲಿಸಿ ಎಂದು ನಾನು ಎಲ್ಲರಲ್ಲಿಯೂ ಮನವಿ ಮಾಡುತ್ತಿದ್ದೇನೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಹಿಂಸಾಚಾರ ನಡೆದಿರುವ ಕ್ಷೇತ್ರಗಳ ಎಲ್ಲ ಶಾಸಕರು ಮತ್ತು ಹಿರಿಯ ಅಧಿಕಾರಿಗಳನ್ನು ಶೀಘ್ರ ಭೇಟಿಯಾಗಲಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ನಗರದ ಕೆಲ ಭಾಗಗಳಲ್ಲಿ ಮಂಗಳವಾರವೂ ಹಿಂಸಾಚಾರ ಮುಂದುವರಿದಿದೆ. ಕರವಲ್ ನಗರ್ ಟೈರ್‌ ಮಾರ್ಕೆಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದು ಅಗ್ನಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವಾಗಿ ನಡೆದ ದುಷ್ಕೃತ್ಯವೋ ಎನ್ನುವುದು ದೃಢಪಟ್ಟಿಲ್ಲ.

ಅಗ್ನಿಶಾಮಕ ಸಿಬ್ಬಂದಿಗೆ ಅಗ್ನಿಅನಾಹುತದ ಸ್ಥಳ ತಲುಪಲೂ ಸಾಧ್ಯವಾಗಿಲ್ಲ. ಅಗ್ನಿಸಾಮಕ ವಾಹನವು ಪೊಲೀಸ್ ರಕ್ಷಣೆಗಾಗಿ ಜಾಫ್ರಾಬಾದ್ ಪೊಲೀಸ್ ಠಾಣೆ ಸಮೀಪವೇ ಕಾದು ನಿಂತಿದೆ.

ದೆಹಲಿ ಮೆಟ್ರೊ ರೈಲು ನಿಗಮವು ಐದು ಸ್ಟೇಷನ್‌ಗಳಲ್ಲಿ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಟ್ವೀಟ್ ಮಾಡಿದೆ. ‘ಜಾಫ್ರಾಬಾದ್, ಮೌಜ್‌ಪುರ್–ಬಾಬರ್‌ಪುರ್, ಗೋಕುಲ್‌ಪುರಿ, ಜೊಹ್ರಿ ಎನ್‌ಕ್ಲೇವ್ ಮತ್ತು ಶಿವ್‌ ವಿಹಾರ್‌ ನಿಲ್ದಾಣಗಳನ್ನು ಮುಚ್ಚಲಾಗಿದೆ. ವೆಲ್‌ಕಮ್ ಮೆಟ್ರೊ ಸ್ಟೇಷನ್‌ನಲ್ಲಿಯೇ ರೈಲು ಸಂಚಾರ ಅಂತ್ಯಗೊಳ್ಳಲಿದೆ ಎಂದು ನಿಗಮ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.