ಮುಂಬೈ: ‘ವಿದೇಶಕ್ಕೆ ಹೋಗುವುದಾದರೆ ₹60 ಕೋಟಿ ಠೇವಣಿಯಿಡಿ’ ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕದ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ವಂಚನೆ ಪ್ರಕರಣದಲ್ಲಿ ಇಬ್ಬರೂ ಆರೋಪಿಗಳಾಗಿರುವುದರಿಂದ, ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದೆ.
ತಮ್ಮ ವಿರುದ್ಧ ಜಾರಿಗೊಳಿಸಿರುವ ಲುಕ್‌ಔಟ್ ನೋಟಿಸ್‌ನ್ನು 2025ರ ಅಕ್ಟೋಬರ್‌ನಿಂದ 2026ರ ಜನವರಿವರೆಗೆ ಅಮಾನತುಗೊಳಿಸುವಂತೆ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
₹60 ಕೋಟಿ ಠೇವಣಿ ಇಟ್ಟರೆ ನಿಮ್ಮ ಅರ್ಜಿಯನ್ನು ಪರಿಗಣಿಸಲಾಗುವುದು ಎಂದಿದೆ.
ಮುಂಬೈ ಮೂಲದ ಉದ್ಯಮಿ ಹಾಗೂ ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ ನಿರ್ದೇಶಕ ದೀಪಕ್ ಕೊಥಾರಿ ಅವರ ದೂರಿನ ಮೇರೆಗೆ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗದಲ್ಲಿ ದಂಪತಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಶಿಲ್ಪಾ ದಂಪತಿಯು ಪ್ರಸ್ತುತ ಕಾರ್ಯನಿರ್ವಹಿಸದ ತಮ್ಮ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯಾಪಾರ ವಿಸ್ತರಣೆಗಾಗಿ 2015ರಿಂದ 2023ರ ಅವಧಿಯಲ್ಲಿ ₹60.48 ಕೋಟಿ ಸಾಲ ಪಡೆದಿದ್ದರು.
ಸಕಾಲಕ್ಕೆ ಸಾಲವನ್ನು ಮರುಪಾವತಿಸದಿದ್ದರಿಂದ ಕೊಥಾರಿ ವಂಚನೆಯ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.