ADVERTISEMENT

ಮುಂಬೈ ಅತ್ಯಾಚಾರವನ್ನು ಹಾಥರಸ್‌ ಪ್ರಕರಣಕ್ಕೆ ಹೋಲಿಸುವುದು ಸರಿಯಲ್ಲ: ಶಿವಸೇನಾ

ಪಿಟಿಐ
Published 13 ಸೆಪ್ಟೆಂಬರ್ 2021, 10:11 IST
Last Updated 13 ಸೆಪ್ಟೆಂಬರ್ 2021, 10:11 IST
ಶಿವಸೇನಾ
ಶಿವಸೇನಾ   

ಮುಂಬೈ: ‘ಇಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಆದರೆ ವಿಶ್ವದಲ್ಲಿ ಮಹಿಳೆಯರಿಗೆ ಮುಂಬೈ ಅತ್ಯಂತ ಸುರಕ್ಷಿತ ಸ್ಥಳ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಶಿವಸೇನಾ ಪಕ್ಷವು ಸೋಮವಾರ ಹೇಳಿದೆ.

‘ಮಹಾರಾಷ್ಟ್ರದಲ್ಲಿ ನಡೆದ ಈ ಅತ್ಯಾಚಾರವು ರಾಜ್ಯದ ಸಂಸ್ಕೃತಿಗೆ ಕಳಂಕವನ್ನು ತಂದಿದೆ. ದೇಶದ ಜನರಲ್ಲಿರುವ ಆಕ್ರೋಶವು ನ್ಯಾಯಸಮ್ಮತವಾಗಿದೆ’ ಎಂದು ಶಿವಸೇನಾದ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

ದೇಶವನ್ನು ಬೆಚ್ಚಿಬೀಳಿಸಿದ್ದ ದೆಹಲಿಯ ‘ನಿರ್ಭಯಾ’ ಪ್ರಕರಣವನ್ನು ಹೋಲುವ ಮತ್ತೊಂದು ಹೇಯಕೃತ್ಯ ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿತ್ತು. 34 ವರ್ಷದ ಮಹಿಳೆಯ ಗುಪ್ತಾಂಗಕ್ಕೆ ಕಬ್ಬಿಣದ ಸರಳನ್ನು ತೂರಿಸಿ, ಚಾಕುವಿನಿಂದ ಹಲ್ಲೆ ಮಾಡಲಾಗಿತ್ತು. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಸಂತ್ರಸ್ತೆಯು, ಚಿಕಿತ್ಸೆ ಫಲಿಸದೇ ಶನಿವಾರ ಬೆಳಿಗ್ಗೆ ಮೃತಪಟ್ಟರು.

ADVERTISEMENT

‘ಈ ಹೇಯಕೃತ್ಯ ‘ಭಯಾನಕ ವಿಕೃತತೆಯ’ ಪರಿಣಾಮವಾಗಿದೆ. ಈ ರೀತಿಯ ವಿಕೃತತೆಯನ್ನು ವಿಶ್ವದ ಯಾವುದೇ ಭಾಗದಲ್ಲೂ ಕಾಣಬಹುದು. ಈ ಪ್ರಕರಣವನ್ನು ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣಕ್ಕೆ ಹೋಲಿಸುವುದು ಸರಿಯಲ್ಲ. ಹಾಥರಸ್ ಪ್ರಕರಣದ ಆರೋಪಿಗಳಿಗೆ ಅಲ್ಲಿನ ರಾಜ್ಯ ಸರ್ಕಾರದ ಬೆಂಬಲವಿತ್ತು. ಅವರ ಬಂಧನದಲ್ಲಿ ವಿಳಂಬವೂ ಆಗಿತ್ತು. ಸಾಕ್ಷಿಯನ್ನು ನಾಶಗೊಳಿಸುವ ಅವಸರದಲ್ಲೇ ಸಂತ್ರಸ್ತೆಯ ದೇಹವನ್ನು ಸುಟ್ಟು ಹಾಕಲಾಗಿತ್ತು’ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

‘ಯೋಗಿ ಆದಿತ್ಯನಾಥ್‌ ಸರ್ಕಾರವು ಹಾಥರಸ್‌ನಲ್ಲಿ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ಹೇಳಿತ್ತು. ಆದರೆ ಅದು ಸುಳ್ಳು ಎಂಬುದು ಸಾಬೀತಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ತಂಡವು ತ್ವರಿತವಾಗಿ ಸಾಕಿನಾಕ ಪ್ರದೇಶವನ್ನು ತಲುಪಿತ್ತು. ಈ ತುರ್ತು ನಡೆಯು ಹಥಾರಸ್‌ನಲ್ಲಿ ಕಂಡುಬಂದಿರಲಿಲ್ಲ. ಕಥುವಾ ಅತ್ಯಾಚಾರ ಪ್ರಕರಣದಲ್ಲೂ ರಾಜಕೀಯ ಪಕ್ಷವೊಂದು ಆರೋಪಿಗೆ ರಕ್ಷಣೆ ನೀಡಿತ್ತು. ಆದರೆ ಈ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು 10 ನಿಮಿಷಗಳಲ್ಲಿ ಬಂಧಿಸಲಾಗಿದೆ’ ಎಂದು ಪತ್ರಿಕೆಯು ಹೇಳಿದೆ.

‘ಈ ಪ್ರಕರಣವನ್ನು ನ್ಯಾಯಾಂಗಕ್ಕೆ ಬಿಟ್ಟುಬಿಡೋಣ. ಈ ಪ್ರಕರಣದಲ್ಲಿ ಆರೋಪಿ ಪರವಾಗಿ ಯಾರು ನಿಂತಿಲ್ಲ. ಹಾಗಾಗಿ ಖಂಡಿತವಾಗಿ ತಪ್ಪಿತಸ್ಥನಿಗೆ ಗಲ್ಲುಶಿಕ್ಷೆ ಸಿಗಲಿದೆ. ಸಾಕಿನಾಕ ಸಂತ್ರಸ್ತೆಯ ಇಬ್ಬರು ಹೆಣ್ಣು ಮಕ್ಕಳ ವಿಧ್ಯಾಭ್ಯಾಸ ಮತ್ತು ಜೀವನೋಪಾಯವನ್ನು ನೋಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ’ ಎಂದು ಪತ್ರಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.