ADVERTISEMENT

ಈಶಾನ್ಯ ಭಾಗವನ್ನು ನಿರ್ಲಕ್ಷಿಸಿದ್ದ ಹಿಂದಿನ ಸರ್ಕಾರಗಳು: ಪ್ರಧಾನಿ

ಪಿಟಿಐ
Published 6 ಡಿಸೆಂಬರ್ 2024, 16:15 IST
Last Updated 6 ಡಿಸೆಂಬರ್ 2024, 16:15 IST
ನವದೆಹಲಿಯ ಭಾರತ ಮಂಟಪದಲ್ಲಿ ಹಮ್ಮಿಕೊಂಡಿರುವ ‘ಅಷ್ಟಲಕ್ಮಿ ಮಹೋತ್ಸವ’ದಲ್ಲಿ ಪ್ರಧಾನಿ ಮೋದಿ, ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರದ ರಾಜ್ಯ ಸಚಿವ ಸುಕಾಂತ ಮಜುಂದಾರ್‌ ಪಾಲ್ಗೊಂಡರು
ನವದೆಹಲಿಯ ಭಾರತ ಮಂಟಪದಲ್ಲಿ ಹಮ್ಮಿಕೊಂಡಿರುವ ‘ಅಷ್ಟಲಕ್ಮಿ ಮಹೋತ್ಸವ’ದಲ್ಲಿ ಪ್ರಧಾನಿ ಮೋದಿ, ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರದ ರಾಜ್ಯ ಸಚಿವ ಸುಕಾಂತ ಮಜುಂದಾರ್‌ ಪಾಲ್ಗೊಂಡರು   

ನವದೆಹಲಿ: ಈಶಾನ್ಯ ಪ್ರದೇಶದಲ್ಲಿ ಕಡಿಮೆ ಜನಸಂಖ್ಯೆ ಮತ್ತು ಮತಗಳು ಇದ್ದ ಕಾರಣ ಈ ಭಾಗದ ಪ್ರಗತಿಗೆ ಹಿಂದಿನ ಸರ್ಕಾರಗಳು ಹೆಚ್ಚಿನ ಒತ್ತು ನೀಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಷ್ಟಲಕ್ಷ್ಮಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಭಾಗಕ್ಕೆ ಸಚಿವಾಲಯವೊಂದನ್ನು ಮೀಸಲಿಸಿರಿಸಿದ ಹೆಗ್ಗಳಿಕೆ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಈ ಭಾಗದ ಅಭಿವೃದ್ಧಿಗೆ ಪ್ರತಿ ಸಚಿವಾಲಯಕ್ಕೆ ಬಜೆಟ್‌ನಲ್ಲಿ ಅವರು ಶೇ 20 ಮೀಸಲಿರಿಸಿದ್ದರು’ ಎಂದರು.

‘ಕಳೆದ ಹತ್ತು ವರ್ಷಗಳಲ್ಲಿ ಈಶಾನ್ಯ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದೇವೆ. ಇದು ಸುಲಭದ ಕೆಲಸವಾಗಿರಲಿಲ್ಲ. ಭಾರತದ ಪ್ರಗತಿಯೊಂದಿಗೆ ಈಶಾನ್ಯ ರಾಜ್ಯಗಳನ್ನೂ ಸೇರಿಸಲು ನಾವು ಸಾಧ್ಯವಾದಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಹೇಳಿದರು. 

ADVERTISEMENT

ಮುಂಬರುವ ದಿನಗಳಲ್ಲಿ ಪೂರ್ವ ಭಾರತ ಮತ್ತು ಈಶಾನ್ಯ ಭಾಗಗಳು ಸಾಕಷ್ಟು ಅಭಿವೃದ್ಧಿ ಕಾಣಲಿವೆ. ಮುಂಬೈ, ಹೈದರಾಬಾದ್‌, ಚೆನ್ನೈ ಮತ್ತು ಬೆಂಗಳೂರು ನಗರಗಳಂತೆ ಗುವಾಹಟಿ, ಶಿಲ್ಲಾಂಗ್, ಇಂಫಾಲ್, ಇಟಾನಗರ ಮತ್ತು ಐಜ್ವಾಲ್ ನಗರಗಳು ಬೆಳವಣಿಗೆ ಹೊಂದಲಿವೆ ಎಂದು ಪ್ರಧಾನಿ ಹೇಳಿದರು.

‘ಕಳೆದ ಹತ್ತು ವರ್ಷಗಳಲ್ಲಿ ದೆಹಲಿ ಹಾಗೂ ಈಶಾನ್ಯ ಜನರ ನಡುವಿನ ಕಂದಕ ತಗ್ಗಿಸಲು ನಮ್ಮ ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿದೆ. ಕೇಂದ್ರದ ಸಚಿವರು ಹತ್ತು ವರ್ಷಗಳಲ್ಲಿ 700 ಬಾರಿ ಈಶಾನ್ಯ ಭಾಗಕ್ಕೆ ಭೇಟಿ ನೀಡಿದ್ದಾರೆ’ ಎಂದರು.

ಮೊದಲ ಬಾರಿಗೆ ಅಷ್ಟಲಕ್ಮ್ಷಿ ಮಹೋತ್ಸವವನ್ನು ಇಲ್ಲಿನ ಭಾರತ ಮಂಟಪದಲ್ಲಿ ಡಿ.6ರಿಂದ 8ರವರೆಗೆ ಆಚರಿಸಲಾಗುತ್ತಿದೆ. ಈ ಉತ್ಸವವು ಈಶಾನ್ಯ ಭಾಗದ ಎಂಟು ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ ಮತ್ತು ಸಿಕ್ಕಿಂನ ಸೌಂದರ್ಯ, ವೈವಿಧ್ಯ ಪ್ರದರ್ಶಿಸುವ ಗುರಿ ಹೊಂದಿದೆ. ಇವೆಲ್ಲವನ್ನೂ ಒಟ್ಟಾಗಿ ‘ಅಷ್ಟಲಕ್ಷ್ಮಿ’ ಎಂದು ಕರೆಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.