ADVERTISEMENT

ಮುಖ್ಯಮಂತ್ರಿಯಾಗಿ ಐದು ತಿಂಗಳ ಬಳಿಕ ಅಧಿಕೃತ ನಿವಾಸಕ್ಕೆ CM ಫಡಣವೀಸ್ ಪ್ರವೇಶ

ಪಿಟಿಐ
Published 30 ಏಪ್ರಿಲ್ 2025, 15:40 IST
Last Updated 30 ಏಪ್ರಿಲ್ 2025, 15:40 IST
<div class="paragraphs"><p>ಮಹಾರಾಷ್ಟ್ರ ಮುಖ್ಯಮಂತ್ರಿ ಅಧಿಕೃತ ನಿವಾಸ ‘ವರ್ಷಾ’ ಪ್ರವೇಶ ಸಂದರ್ಭಲ್ಲಿ ಪೂಜೆಯಲ್ಲಿ ನಿರತ ಅಮೃತ ಫಡಣವೀಸ್ ಮತ್ತು ದೇವೇಂದ್ರ ಫಡಣವೀಸ್</p></div>

ಮಹಾರಾಷ್ಟ್ರ ಮುಖ್ಯಮಂತ್ರಿ ಅಧಿಕೃತ ನಿವಾಸ ‘ವರ್ಷಾ’ ಪ್ರವೇಶ ಸಂದರ್ಭಲ್ಲಿ ಪೂಜೆಯಲ್ಲಿ ನಿರತ ಅಮೃತ ಫಡಣವೀಸ್ ಮತ್ತು ದೇವೇಂದ್ರ ಫಡಣವೀಸ್

   

ಎಕ್ಸ್ ಚಿತ್ರ

ಮುಂಬೈ: ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಮಗಳ ಪರೀಕ್ಷೆ ಪೂರ್ಣಗೊಳ್ಳುವವರೆಗೂ ಇರುವ ಮನೆಯಲ್ಲೇ ಮುಂದುವರಿಯುವುದಾಗಿ ಹೇಳಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಅಕ್ಷಯ ತೃತೀಯ ದಿನವಾದ ಬುಧವಾರ ಸರ್ಕಾರಿ ಬಂಗಲೆ ‘ವರ್ಷಾ’ಗೆ ಪ್ರವೇಶ ಮಾಡಿದ್ದಾರೆ.

ADVERTISEMENT

2024ರ ಡಿ. 5ರಂದು ಫಡಣವೀಸ್ ಅವರು ಮೂರನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2014ರಿಂದ 2019ರವರೆಗೆ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅಧಿಕೃತ ಬಂಗಲೆ ವರ್ಷಾದಲ್ಲಿ ಅವರು ಇದ್ದರು. 2019ರ ನವೆಂಬರ್‌ನಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 80 ಗಂಟೆಯೊಳಗೆ ಅಧಿಕಾರ ಕಳೆದುಕೊಂಡರು.

ಈ ಸಂದರ್ಭದಲ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಆಗ ಅವರು ‘ಸಾಗರ್‌’ ಹೆಸರಿನ ಬಂಗಲೆಯಲ್ಲಿದ್ದರು. ಇದೀಗ ಮೂರನೇ ಬಾರಿ ಮುಖ್ಯಮಂತ್ರಿಯಾದ ಐದು ತಿಂಗಳ ಬಳಿಕ ಫಡಣವೀಸ್ ಸರ್ಕಾರಿ ಬಂಗಲೆಗೆ ಸ್ಥಳಾಂತರಗೊಂಡಿದ್ದಾರೆ. 

ಈ ವಿಷಯವನ್ನು ಫಡಣವೀಸ್ ಮತ್ತು ಅವರ ಪತ್ನಿ ಅಮೃತಾ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ (ಟ್ವಿಟರ್‌)ನಲ್ಲಿ ಹಂಚಿಕೊಂಡಿದ್ದು, ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ‘ವರ್ಷಾ’ದಲ್ಲಿ ಸಣ್ಣ ಪೂಜೆ ಮತ್ತು ಗೃಹ ಪ್ರವೇಶ ನಡೆಯಿತು ಎಂದಿದ್ದಾರೆ. 

ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಈ ಹಿಂದೆ ಹೇಳಿಕೆಯೊಂದನ್ನು ನೀಡಿ, ‘ತಮ್ಮ ಮುಖ್ಯಮಂತ್ರಿ ಸ್ಥಾನ ಭದ್ರವಾಗಿಸಲು ಅಂದಿನ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯದಲ್ಲಿ ಕೋಣದ ಕೊಂಬುಗಳನ್ನು ಬಲಿ ನೀಡಲಾಗಿತ್ತು. ನಂತರ ಅವುಗಳನ್ನು ‘ವರ್ಷಾ’ದ ಆವರಣದಲ್ಲಿ ಹುಗಿಯಲಾಗಿತ್ತು. ಏಕನಾಥ ಶಿಂದೆ ಹೊರತುಪಡಿಸಿ ಈ ಬಂಗಲೆಯೊಳಗೆ ಬೇರೆ ಯಾರೂ ಬರಬಾರದು ಎಂದು ಪೂಜೆ ಮಾಡಿಸಲಾಗಿದೆ’ ಎಂದು ಆರೋಪಿಸಿದ್ದರು.

ರಾವುತ್ ಹೇಳಿಕೆಯನ್ನು ಅಲ್ಲಗಳೆದಿದ್ದ ಫಡಣವೀಸ್, ‘ಏಕನಾಥ ಶಿಂದೆ ಬಿಟ್ಟುಕೊಟ್ಟ ತಕ್ಷಣವೇ ನಾನು ‘ವರ್ಷಾ’ ಪ್ರವೇಶಿಸುತ್ತೇನೆ. ಕೆಲವೊಂದು ಸಣ್ಣ ಪುಟ್ಟ ದುರಸ್ತಿಗಳಿವೆ. ಇದರ ನಡುವೆಯೇ ಮಗಳ 10ನೇ ತರಗತಿ ಪರೀಕ್ಷೆ ಇರುವುದರಿಂದ, ಅದನ್ನು ಮುಗಿದ ನಂತರ ಸರ್ಕಾರಿ ಬಂಗಲೆಗೆ ಹೋಗಲಿದ್ದೇವೆ. ಹೀಗಾಗಿ ಕಳೆದ ಐದು ತಿಂಗಳಿಂದ ‘ವರ್ಷಾ’ಗೆ ಸ್ಥಳಾಂತರಗೊಂಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು.

ಮುಖ್ಯಮಂತ್ರಿ ಫಡಣವೀಸ್ ಪುತ್ರಿ ದಿವಿಜಾ ಅವರು 10ನೇ ತರಗತಿಯಲ್ಲಿ ಶೇ 92.60ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.