ADVERTISEMENT

ರಾಷ್ಟ್ರಪತಿ ಆಡಳಿತದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ದೇವೇಂದ್ರ: ಶಿವಸೇನಾ

ಮಹಾರಾಷ್ಟ್ರ ರಾಜಕೀಯ

ಏಜೆನ್ಸೀಸ್
Published 14 ನವೆಂಬರ್ 2019, 10:12 IST
Last Updated 14 ನವೆಂಬರ್ 2019, 10:12 IST
   

ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯು 'ಪೂರ್ವ ನಿರ್ಧರಿತ ಆಟ' ಎಂದು ಶಿವಸೇನಾ ಗುರುವಾರ ಆರೋಪಿಸಿದೆ.

ಸರ್ಕಾರ ರಚನೆಗೆ ರಾಜಕೀಯ ಪಕ್ಷಗಳಿಗೆ ಈಗ ಆರು ತಿಂಗಳ ಅವಕಾಶ ನೀಡಿದ್ದಾರೆ ಎಂದು ರಾಜ್ಯಪಾಲರ ನಿರ್ಧಾರವನ್ನು ಶಿವಸೇನಾ ಮೂದಲಿಸಿದೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಕುರಿತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ 'ಮೊಸಳೆ ಕಣ್ಣೀರು' ಸುರಿಸುತ್ತಿದ್ದಾರೆ, ಪರೋಕ್ಷವಾಗಿ ಅಧಿಕಾರವು ಈಗಲೂ ಬಿಜೆಪಿ ಕೈಯಲ್ಲಿಯೇ ಇದೆ ಎಂದಿದೆ. ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಸಾಬೀತು ಪಡಿಸಲು ಶಿವಸೇನಾಗೆ ಕೇವಲ 24 ಗಂಟೆ ಅವಕಾಶ ನೀಡಿದ್ದರ ವಿರುದ್ಧ ಪಕ್ಷದ ಮುಖವಾಣಿ 'ಸಾಮನಾ' ಪತ್ರಿಕೆ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.'ಕಾಣದ ಶಕ್ತಿಯು ಈ ಆಟವನ್ನು ನಿಯಂತ್ರಿಸುತ್ತಿರುವಂತೆ ತೋರುತ್ತಿದೆ ಹಾಗೂ ನಿರ್ಧಾರಗಳು ಸಹ ಆ ಶಕ್ತಿ ಹೇಳಿದಂತೆಯೇ ತೆಗೆದುಕೊಳ್ಳಲಾಗುತ್ತಿದೆ' ಎಂದು ಪ್ರಕಟಿಸಿದೆ.

ADVERTISEMENT

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆ ಅಸಾಧ್ಯ ಎಂದು ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಕೇಂದ್ರಕ್ಕೆ ವರದಿ ಕಳುಹಿಸಿದ್ದರು. ರಾಜ್ಯಪಾಲರ ವರದಿ ಆಧರಿಸಿ ಮಂಗಳವಾರದಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಸರ್ಕಾರ ರಚನೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಶಿವಸೇನಾ ಮಾಡಿದ ಮನವಿಯನ್ನು ರಾಜ್ಯಪಾಲರು ಪರಿಗಣಿಸಲಿಲ್ಲ.

ಅಕ್ಟೋಬರ್‌ 21ರಂದು ನಡೆದ ವಿಧಾನಸಭಾ ಚುನಾವಣೆಯನ್ನುಬಿಜೆಪಿ ಮತ್ತು ಶಿವಸೇನಾ ಮೈತ್ರಿ ಮಾಡಿಕೊಂಡು ಎದುರಿಸಿದವು. 288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 105 ಮತ್ತು ಶಿವಸೇನಾ 56 ಕ್ಷೇತ್ರಗಳಲ್ಲಿ ಗೆಲುವು ಪಡೆದವು. ಆದರೆ, ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವಂತೆ ಶಿವಸೇನಾ ಮುಂದಿಟ್ಟ ಬೇಡಿಕೆಗೆ ಬಿಜೆಪಿ ಸಮ್ಮತಿಸಲಿಲ್ಲ. ಇದರಿಂದಾಗಿ ಮೂರು ದಶಕಗಳ ಮೈತ್ರಿ ಮುರಿದು ಬಿದ್ದಿದೆ. ಕಾಂಗ್ರೆಸ್‌ 44 ಸ್ಥಾನ ಮತ್ತು ಎನ್‌ಸಿಪಿ 54 ಸ್ಥಾನಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.