ನವದೆಹಲಿ: ದುರಂತಕ್ಕೀಡಾದ ವಿಮಾನ ಪೈಲಟ್‌ಗಳ ತರಬೇತಿಯ ಮಾಹಿತಿ ಹಾಗೂ ಹಾರಾಟಕ್ಕೆ ಅನುಮತಿ ಕೊಟ್ಟ ಸಿಬ್ಬಂದಿಯ ವಿವರ ನೀಡುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾಕ್ಕೆ ಸೂಚಿಸಿದೆ.
‘ದೇಶದಲ್ಲಿರುವ ಎಲ್ಲ ಫ್ಲೈಯಿಂಗ್ ಶಾಲೆಗಳು ತರಬೇತಿ ಪ್ರಕ್ರಿಯೆಯನ್ನು ನಿರಂತರವಾಗಿ ಪರಿಶೀಲನೆ ನಡೆಸಬೇಕು’ ಎಂದು ಗೋಪ್ಯ ಮಾಹಿತಿಯನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಪಘಾತದ ಕುರಿತು ತನಿಖೆ ಕೈಗೆತ್ತಿಕೊಂಡಿರುವ ಡಿಜಿಸಿಎ ಈ ಸಂಬಂಧ ಮಾಹಿತಿ ಕೇಳಿದೆ. ಕಳೆದ ಕೆಲವು ತಿಂಗಳಿಂದ ತನ್ನ ಸೂಚನೆಯ ನಂತರ ತೆಗೆದುಕೊಂಡ ಕ್ರಮಗಳ ಬಗ್ಗೆ ಸೋಮವಾರದ ಒಳಗಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದೆ. ಆದರೆ, ಡಿಜಿಸಿಎ ಸೂಚನೆಯನ್ನು ಏರ್ ಇಂಡಿಯಾ ಪಾಲನೆ ಮಾಡಿದೆಯೇ ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಏರ್‌ಲೈನ್ಸ್, ಡಿಜಿಸಿಎ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪೈಲಟ್ ಸುಮೀತ್ ಸಭರ್ವಾಲ್ ಅವರು 8,200 ಗಂಟೆ ಹಾರಾಟ ನಡೆಸಿದ ಅನುಭವ ಹೊಂದಿದ್ದು, ಸಹ ಪೈಲಟ್ ಕ್ಲೈವ್ ಕುಂದರ್ 1,100 ಗಂಟೆಗಳ ಹಾರಾಟ ನಡೆಸಿದ್ದರು ಎಂದು ಭಾರತ ಸರ್ಕಾರವು ಈಗಾಗಲೇ ತಿಳಿಸಿದೆ.
ಪೈಲಟ್‌ಗಳಿಗೆ ನೀಡಿದ ತರಬೇತಿ, ಅದನ್ನು ಪುರಸ್ಕರಿಸುವ ದಾಖಲೆಗಳು, ವಿಮಾನ ಹಾರಾಟಕ್ಕೆ ಅನುಮತಿ ನೀಡಿದ ಮಾಹಿತಿ ನೀಡುವಂತೆ ಕೋರಿದೆ. ಸಾಮಾನ್ಯವಾಗಿ ಯಾವುದೇ ವಿಮಾನ ಅಪಘಾತ ಸಂಭವಿಸಿದ ವೇಳೆ, ಪೈಲಟ್‌ಗಳ ತರಬೇತಿ, ಅರ್ಹತೆ, ವಿಮಾನಗಳ ಇತಿಹಾಸ, ವೈದ್ಯಕೀಯ ದಾಖಲೆಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ಪಡೆಯುವ ಪದ್ಧತಿಯಿದೆ.
ಏರ್ ಇಂಡಿಯಾದ ದೈನಂದಿನ ಕಾರ್ಯಾಚರಣೆ ಕುರಿತಂತೆ ‘ಜ್ಞಾಪನಾ ಪತ್ರ (ಮೆಮೊ)’ದಲ್ಲಿ ಉಲ್ಲೇಖಿಸಿಲ್ಲ. ಅಪಘಾತದ ನಂತರ ಪ್ರಮುಖ ಮಾಹಿತಿಗಳನ್ನಷ್ಟೇ ಕೇಳಿದೆ. ವಿಮಾನ ಹಾರಾಟಕ್ಕೆ ಸಿದ್ಧತೆ ನಡೆಸಿ, ಒಪ್ಪಿಗೆ ಸೂಚಿಸಿದವರು, ಹವಾಮಾನ ಪರಿಸ್ಥಿತಿ, ವಾಯುಮಾರ್ಗದ ಸ್ಥಿತಿ ಹಾಗೂ ಪೈಲಟ್‌ಗಳ ಜೊತೆ ನಿರಂತರ ಸಂವಹನ ನಡೆಸಿದವರ ಕುರಿತು ಮಾಹಿತಿ ನೀಡಲು ಡಿಜಿಸಿಎ ತಿಳಿಸಿದೆ.
ಸ್ಟೀಫನ್ ಭೇಟಿ: ಈ ಬೆಳವಣಿಗೆ ಬೆನ್ನಲ್ಲೇ, ಬೋಯಿಂಗ್ ವಾಣಿಜ್ಯ ವಿಭಾಗಗಳ ಮುಖ್ಯಸ್ಥ ಸ್ಟೀಫನ್ ಪೋಪ್ ಅವರು ಸೋಮವಾರ ನವದೆಹಲಿಯಲ್ಲಿರುವ ಏರ್ ಇಂಡಿಯಾ ಕಚೇರಿಗೆ ಭೇಟಿ ನೀಡಿದ್ದು, ವಿಮಾನ ಅಪಘಾತದ ಕುರಿತಂತೆ ಏರ್ ಇಂಡಿಯಾ ಮುಖ್ಯಸ್ಥರ ಜೊತೆ ವಿಸ್ತೃತವಾಗಿ ಚರ್ಚೆ ನಡೆಸಿದ್ದಾರೆ.
ಏರ್ ಇಂಡಿಯಾವನ್ನು ಅತ್ಯಂತ ಸುರಕ್ಷಿತ ವಿಮಾನಯಾನ ಸಂಸ್ಥೆಯನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ದುರಂತವು ವೇಗವರ್ಧಕವಾಗಿರಬೇಕು.ಎನ್.ಚಂದ್ರಶೇಖರನ್, ಏರ್ ಇಂಡಿಯಾ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.