ಪ್ರಾತಿನಿಧಿಕ ಚಿತ್ರ
ನವದೆಹಲಿ: ಪ್ರವಾಸಿಗರು ಕಾಶ್ಮೀರದಿಂದ ವಾಪಸ್ ಆಗಲು ಅನುಕೂಲವಾಗುವಂತೆ ಶ್ರೀನಗರದಿಂದ ವಿಮಾನ ಸಂಚಾರವನ್ನು ಹೆಚ್ಚಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ಬುಧವಾರ ಸೂಚಿಸಿದೆ.
ಜೊತೆಗೆ, ಶ್ರೀನಗರ ವಿಮಾನ ಟಿಕೆಟ್‌ಗಳ ರದ್ದತಿ ಹಾಗೂ ಬುಕಿಂಗ್ ಮರುಹೊಂದಾಣಿಕೆಗೆ ಶುಲ್ಕ ಮನ್ನಾ ಮಾಡುವುದನ್ನು ಪರಿಗಣಿಸುವಂತೆಯೂ ಹೇಳಿದೆ.
ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪಟ್ಟಣ ಸಮೀಪದ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ 28 ಮಂದಿ ಮೃತಪಟ್ಟು, ಕನಿಷ್ಠ 20 ಜನರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ, ಕಣಿವೆಯಾದ್ಯಂತ ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ದಾಳಿ ಬಳಿಕ ಪ್ರವಾಸಿಗರು ಕಣಿವೆಯಿಂದ ಹಿಂದಿರುಗಲು ಬಯಸುತ್ತಿರುವುದರಿಂದ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಪ್ರಕಟಿಸಿರುವ ಡಿಜಿಸಿಎ, ಬೇಡಿಕೆಗೆ ಅನುಗುಣವಾಗಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು, ಶ್ರೀನಗರದಿಂದ ದೇಶದ ವಿವಿಧ ಸ್ಥಳಗಳಿಗೆ ನಿರಂತರ ಸಂಪರ್ಕವನ್ನು ಖಾತ್ರಿಪಡಿಸಲು ಮತ್ತು ಕಣಿವೆಯಲ್ಲಿ ಸಿಲುಕಿರುವ ಪ್ರವಾಸಿಗರ ಸ್ಥಳಾಂತರಕ್ಕೆ ಅನುಕೂಲವಾಗುವಂತೆ ವಿಮಾನಯಾನ ಸಂಸ್ಥೆಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.
ಹಾಗೆಯೇ, ಶ್ರೀನಗರ ಮಾರ್ಗದ ಟಿಕೆಟ್ ದರದಲ್ಲಿ ಯಾವುದೇ ರೀತಿಯ ಏರಿಕೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿರುವ ಡಿಜಿಸಿಎ, ಸಂಕಷ್ಟದ ಸಮಯದಲ್ಲಿ ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಿರುವ ಪ್ರವಾಸಿಗರಿಗೆ ಎಲ್ಲ ರೀತಿಯ ಅಗತ್ಯ ನೆರವನ್ನು ಒದಗಿಸುವಂತೆಯೂ ಕೇಳಿದೆ.
ಏರ್ ಇಂಡಿಯಾ ಹಾಗೂ ಇಂಡಿಗೊ, ಶ್ರೀನಗರದಿಂದ ಹೆಚ್ಚುವರಿ ವಿಮಾನಗಳ ಕಾರ್ಯಾಚರಣೆಯನ್ನು ಬುಧವಾರ ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.