ಮುಂಬೈ: ಬೋಯಿಂಗ್ 787 ಮತ್ತು 737 ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ಸೋಮವಾರ ನಿರ್ದೇಶನ ನೀಡಿದೆ.
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಅದರ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ‘ಕಟ್ ಆಫ್ ಸ್ಥಿತಿಯಲ್ಲಿ ಇದ್ದವು’ ಮತ್ತು ಇದರಿಂದ ಪೈಲಟ್‌ಗಳು ಗೊಂದಲಕ್ಕೀಡಾಗಿದ್ದರು ಎಂಬ ವಿಷಯ ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ತನಿಖೆಯಿಂದ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳು 150 ಕ್ಕೂ ಹೆಚ್ಚು ಬೋಯಿಂಗ್ 737 ಮತ್ತು 787 ವಿಮಾನಗಳನ್ನು ನಿರ್ವಹಿಸುತ್ತಿವೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಆಕಾಶ ಏರ್, ಸ್ಪೈಸ್‌ಜೆಟ್ ಮತ್ತು ಇಂಡಿಗೊ ಈ ವಿಮಾನಗಳನ್ನು ನಿರ್ವಹಿಸುವ ದೇಶೀಯ ಸಂಸ್ಥೆಗಳಾಗಿವೆ.
ಬೋಯಿಂಗ್ ಬಿ–787 ಸರಣಿಯ ವಿಮಾನದ ಎಂಜಿನ್‌ಗಳ ಇಂಧನ ಸ್ವಿಚ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಇದ್ದು, ಅವುಗಳನ್ನು ಬದಲಿಸಿ ಎಂದು ಅಮೆರಿಕದ ಫೆಡರಲ್ ವಿಮಾನಯಾನ ಸಂಸ್ಥೆ (ಎಫ್‌ಎಎ) 2018ರ ಡಿಸೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿತ್ತು.
ಅಹಮದಾಬಾದ್‌ನಲ್ಲಿ ಪತನವಾದ ಬಿ–787 ವಿಮಾನದಲ್ಲೂ ಇದೇ ಸ್ವಿಚ್ ಬಳಕೆಯಾಗಿದ್ದು, ಅವುಗಳು ಸುಸ್ಥಿತಿಯಲ್ಲಿ ಇದ್ದವೇ ಎಂಬುದರ ಬಗ್ಗೆ ಏರ್ ಇಂಡಿಯಾವು ಪರಿಶೀಲನೆ ನಡೆಸಿರಲಿಲ್ಲ. ಏರ್ ಇಂಡಿಯಾ ವಿಮಾನ ಪತನದ ತನಿಖೆಯ ಕುರಿತು, ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಶನಿವಾರ ಬಿಡುಗಡೆ ಮಾಡಿದ್ದ ಪ್ರಾಥಮಿಕ ವರದಿಯಲ್ಲಿ ಈ ಮಾಹಿತಿ ಇದೆ.
ವಿಮಾನಯಾನ ನಿರ್ವಾಹಕರು 2025ರ ಜುಲೈ 21ರೊಳಗೆ ತಪಾಸಣೆ ಪೂರ್ಣಗೊಳಿಸಲು ಸೂಚಿಸಲಾಗಿದೆ . ತಪಾಸಣೆಯ ನಂತರ ಪರಿಶೀಲನಾ ವರದಿಯನ್ನು ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ( ಡಿಜಿಸಿಎ ) ಆದೇಶದಲ್ಲಿ ತಿಳಿಸಿದೆ.
ಏರ್ ಇಂಡಿಯಾ ಗ್ರೂಪ್ ಈಗಾಗಲೇ ತಮ್ಮ ಬೋಯಿಂಗ್ 787 ಮತ್ತು 737 ವಿಮಾನಗಳಲ್ಲಿ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆಯ ಪರಿಶೀಲನೆಯನ್ನು ಆರಂಭಿಸಿದೆ.
ಏರ್ ಇಂಡಿಯಾದ ಅರ್ಧಕ್ಕಿಂತ ಹೆಚ್ಚು ಬೋಯಿಂಗ್ 787 ವಿಮಾನಗಳ ಲಾಕಿಂಗ್ ವ್ಯವಸ್ಥೆಯ ಪರಿಶೀಲನೆ ಪೂರ್ಣಗೊಂಡಿವೆ ಹಾಗೂ ಬೋಯಿಂಗ್ 737 ವಿಮಾನಗಳ ಪರಿಶೀಲನೆ ಸಹ ಬಹುತೇಕ ಪೂರ್ಣಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಅದರ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ‘ಕಟ್ ಆಫ್ ಸ್ಥಿತಿಯಲ್ಲಿ ಇದ್ದವು’ ಮತ್ತು ಇದರಿಂದ ಪೈಲಟ್‌ಗಳು ಗೊಂದಲಕ್ಕೀಡಾಗಿದ್ದರು ಎಂಬ ವಿಷಯ ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ತನಿಖೆಯಿಂದ ಗೊತ್ತಾಗಿದೆ. ಈ ಲೋಪದಿಂದಾಗಿ ವಿಮಾನವು ಟೇಕ್–ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಕೆಳಗಿಳಿಯಲು ಆರಂಭಿಸಿ, ದುರಂತ ಸಂಭವಿಸಿತು ಎಂದು ಎಎಐಬಿ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ.
ಬ್ರಿಟನ್‌ನ ವಾಯು ಅಪಘಾತ ತನಿಖಾ ಶಾಖೆ ಮತ್ತು ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ನೆರವಿನಿಂದ ಎಎಐಬಿ ಈ ತನಿಖೆಯನ್ನು ನಡೆಸಿದೆ.
ಜೂನ್ 12ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳಲು ಏರ್ ಇಂಡಿಯಾ ವಿಮಾನ (ಬೋಯಿಂಗ್ 787 ಡ್ರೀಮ್‌ಲೈನರ್) ಟೇಕ್–ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದ ವೈದ್ಯಕೀಯ ಕಾಲೇಜಿನ ಸಂಕೀರ್ಣದಲ್ಲಿದ್ದ ಕಟ್ಟಡಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಪ್ರಯಾಣಿಕರು, ಸಿಬ್ಬಂದಿ ಹಾಗೂ ಘಟನಾ ಸ್ಥಳದಲ್ಲಿದ್ದ 19 ಮಂದಿ ಮೃತಪಟ್ಟಿದ್ದರು. ಪ್ರಯಾಣಿಕರೊಬ್ಬರು ಅಪಾಯದಿಂದ ಪಾರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.