ADVERTISEMENT

ಮತ್ತೆ ಪರೀಕ್ಷೆಗೆ ಹಾಜರಾಗಲು ಲೈಂಗಿಕ ಅಲ್ಪಸಂಖ್ಯಾತ ಪೈಲಟ್‌ ಟ್ರೈನಿಗೆ ಸೂಚನೆ

ಪಿಟಿಐ
Published 14 ಜುಲೈ 2022, 16:07 IST
Last Updated 14 ಜುಲೈ 2022, 16:07 IST
ಆ್ಯಡಮ್‌ ಹ್ಯಾರಿ (ಚಿತ್ರ: ಇನ್‌ಸ್ಟಾಗ್ರಾಂ – pilotadamharry)
ಆ್ಯಡಮ್‌ ಹ್ಯಾರಿ (ಚಿತ್ರ: ಇನ್‌ಸ್ಟಾಗ್ರಾಂ – pilotadamharry)   

ನವದೆಹಲಿ: ದೇಶದ ಮೊದಲ ಲೈಂಗಿಕ ಅಲ್ಪಸಂಖ್ಯಾತ ಪೈಲಟ್‌ ಟ್ರೈನಿ ಆ್ಯಡಮ್‌ ಹ್ಯಾರಿ ಅವರಿಗೆ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಗುರುವಾರ ಹೇಳಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಹ್ಯಾರಿ ಅವರಿಗೆ ವಾಣಿಜ್ಯ ಪೈಲಟ್‌ ಪರವಾನಗಿ ನೀಡಲು ನಿರಾಕರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದಿದ್ದವು. ಈ ವರದಿಗಲ್ಲಿ ನಿಜಾಂಶವಿಲ್ಲ ಎಂದು ಡಿಜಿಸಿಎ ಹೇಳಿದೆ.

ಹ್ಯಾರಿ ಅವರು 2020ರ ಜನವರಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಆಗ ಅವರು ಹಾರ್ಮೋನ್‌ ಚಿಕಿತ್ಸೆಗೆ (ಹೆಣ್ಣು ಗಂಡಾಗುವ ಚಿಕಿತ್ಸೆ) ಒಳಗಾಗಿದ್ದರು. ಅವರ ಮಾನಸಿಕ ಆರೋಗ್ಯದ ವರದಿ ಕೂಡ ತೃಪ್ತಿದಾಯಕವಾಗಿರಲಿಲ್ಲ. ಆದ್ದರಿಂದ ಅವರ ಹಾರ್ಮೋನ್‌ ಚಿಕಿತ್ಸೆ ಪೂರ್ಣಗೊಳ್ಳುವ ಆರು ತಿಂಗಳ ವರೆಗೂ ವರದಿಯನ್ನು ಮಾನ್ಯ ಮಾಡಲಿಲ್ಲ ಎಂದು ಡಿಜಿಸಿಎ ತಿಳಿಸಿದೆ. ನಂತರ ಅವರು ಆಗಸ್ಟ್‌ 2020ರಂದು ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಗಾದರು. ಅವರ ವೈದ್ಯಕೀಯ ವರದಿಯಲ್ಲಿ ಅವರ ಹೆಸರು ಆಯೆಷಾ ಟಿ.ಎಸ್‌ ಎಂದೇ ನಮೂದಾಗಿತ್ತು. ಈ ವರದಿಯು 2022 ಆಗಸ್ಟ್‌ 23ರ ವರೆಗೆ ಮಾತ್ರ ಮಾನ್ಯವಾಗಿತ್ತು.

ADVERTISEMENT

ಆದ್ದರಿಂದ ಈಗ ಮತ್ತೊಮ್ಮೆ ಲೈಂಗಿಕ ಅಲ್ಪಸಂಖ್ಯಾತ ವಿಭಾಗದಲ್ಲಿ ಹೆಸರು ನೋಂದಾಯಿಸಿಕೊಂಡು, ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.

ಲೈಂಗಿಕ ಅಲ್ಪಸಂಖ್ಯಾತರಿಗೆ ಪೈಲಟ್‌ ಪರವಾನಗಿ ನೀಡಬಾರದು ಎಂದು ನಿಯಮಾವಳಿಗಳಲ್ಲಿ ಹೇಳಿಲ್ಲ. ವಯಸ್ಸು, ಶೈಕ್ಷಣಿಕ ಅರ್ಹತೆ, ದೈಹಿಕ ಸಾಮರ್ಥ್ಯ, ಅನುಭವಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಡಿಜಿಸಿಎ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.