ADVERTISEMENT

ಮೋದಿ ಸರ್ಕಾರದ ವಿರುದ್ಧ ಮನಮೋಹನ್ ಸಿಂಗ್‌ ಟೀಕೆ: ನಿರ್ಮಲಾ ಸೀತಾರಾಮನ್‌ ಬೇಸರ

ಪಿಟಿಐ
Published 18 ಫೆಬ್ರುವರಿ 2022, 7:38 IST
Last Updated 18 ಫೆಬ್ರುವರಿ 2022, 7:38 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌   

ನವದೆಹಲಿ: 'ನಿಮ್ಮ ಬಗ್ಗೆ ಬಹಳ ಗೌರವವಿದೆ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಇದರಿಂದ ನನಗೆ ನೋವಾಗಿದೆ. ಇದ್ದಕ್ಕಿದ್ದಂತೆ ರಾಷ್ಟ್ರದ ಆರ್ಥಿಕತೆ ಬಗ್ಗೆ ಮಾತನಾಡಿರುವುದು ಅಚ್ಚರಿ ತಂದಿದೆ. ಹೀಗೆಲ್ಲಾ ಮಾತನಾಡಲು ಪಂಜಾಬ್‌ ವಿಧಾನಸಭೆ ಚುನಾವಣೆ ಕಾರಣ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಮನಮೋಹನ ಸಿಂಗ್‌ ಅವರು ಗುರುವಾರ ಪಂಜಾಬ್‌ ಮತದಾರರನ್ನು ಉದ್ದೇಶಿಸಿ ಮಾಡಿದ ವಿಡಿಯೊ ಭಾಷಣದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ, ವಿದೇಶಾಂಗ ನೀತಿಗಳನ್ನು ಟೀಕಿಸಿದ್ದರು.

'ಭಾರತವನ್ನು ದುರ್ಬಲ 5 ರಾಷ್ಟ್ರಗಳ (ಫ್ರೈಜಲ್‌ ಫೈವ್‌) ಪಟ್ಟಿಗೆ ತಂದಿದ್ದು ಯಾರು ಮತ್ತು ಹಣದುಬ್ಬರ ಮಿತಿಮೀರಿದ್ದು ಯಾರ ಅವಧಿಯಲ್ಲಿ ಎಂಬುದು ಮನಮೋಹನ್‌ ಸಿಂಗ್‌ ಅವರಿಗೆ ಚೆನ್ನಾಗಿ ನೆನಪಿರುತ್ತದೆ' ಎಂದು ನಿರ್ಮಲಾ ಸೀತಾರಾಮನ್‌ ತಿರುಗೇಟು ನೀಡಿದ್ದಾರೆ.

ADVERTISEMENT

ರಾಷ್ಟ್ರೀಯ ಷೇರುಪೇಟೆಯ (ಎನ್ಎಸ್‌ಇ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರು ಹಿಮಾಲಯದಲ್ಲಿರುವ ಯೋಗಿ ಒಬ್ಬರಿಂದ ಸಲಹೆ ಪಡೆದ ಬಗ್ಗೆಯೂ ಉಲ್ಲೇಖಿಸಿರುವ ನಿರ್ಮಲಾ ಸೀತಾರಾಮನ್‌, 'ಮನಮೋಹನ ಸಿಂಗ್‌ ಅವರಿಗೆ ತಮ್ಮ ಅಧಿಕಾರದಡಿ ಷೇರುಪೇಟೆ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದೂ ಅರಿವಿರಲಿಲ್ಲ' ಎಂದು ಕಿಡಿಕಾರಿದ್ದಾರೆ.

'ಭಾರತವು ಕೋವಿಡ್‌ ನಂತರ ವಿಶ್ವದಲ್ಲಿ ವೇಗವಾಗಿ ಬೆಳವಣಿಗೆ ಹೊಂದಿತ್ತಿರುವ ಆರ್ಥಿಕ ಶಕ್ತಿಯಾಗಿದೆ. ಈ ಸಂದರ್ಭದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಮನಮೋಹನ ಸಿಂಗ್‌ ಅವರು ರಾಷ್ಟ್ರವನ್ನು ಕೆಳಗೆ ಎಳೆಯುತ್ತಿದ್ದಾರೆ. ಮುಂದಿನ ವರ್ಷವೂ ರಾಷ್ಟ್ರದ ಆರ್ಥಿಕ ಸ್ಥಿತಿ ಹಾಗೆಯೇ ಉಳಿಯಬೇಕು ಎಂದು ಬಯಸಿದ್ದಾರೆ' ಎಂದು ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ.

'ಮೋದಿ ಸರ್ಕಾರ ಮತ್ತು ಮನಮೋಹನ್‌ ಸಿಂಗ್‌ ಸರ್ಕಾರದ ಅವಧಿಯ ರಫ್ತು, ಎಫ್‌ಡಿಐ ಮತ್ತು ಹಣದುಬ್ಬರ ನಿರ್ವಹಣೆಯ ಬಗ್ಗೆ ಹೋಲಿಕೆ ಮಾಡಿದರೆ ಈಗ ಪರಿಸ್ಥಿತಿ ತುಂಬ ಉತ್ತಮವಾಗಿದೆ. ಯಾರ ಅವಧಿಯಲ್ಲಿ ಹಣದುಬ್ಬರವು 22 ತಿಂಗಳ ಕಾಲ ಎರಂಡಂಕಿಯಲ್ಲಿ ಇತ್ತು ಮತ್ತು ಬಂಡವಾಳ (ಕ್ಯಾಪಿಟಲ್‌ ಫ್ಲೈ) ದೇಶದಿಂದ ಹೊರಗೆ ಹಾರಿಹೋಯಿತು ಎಂಬುದು ಪ್ರಧಾನಿಯಾಗಿ ಅವರಿಗೆ ಚೆನ್ನಾಗಿ ನೆನಪಿರುತ್ತದೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯೇರಿಕೆಯನ್ನು ತಡೆಯಲು ಬಿಜೆಪಿ ಸರ್ಕಾರ ಕ್ಷಿಪ್ರವಾಗಿ ಕ್ರಮ ಕೈಗೊಂಡಿತು. ಹಾಗಾಗಿ ಹಣದುಬ್ಬರದ ಪ್ರಮಾಣ ಯುಪಿಎ ಸರ್ಕಾರದ ಅವಧಿಗಿಂತ ಉತ್ತಮವಾಗಿದೆ' ಎಂದು ಎನ್‌ಡಿಎ ಸರ್ಕಾರದ ಆರ್ಥಿಕ ನೀತಿಗಳನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.