ಡಿಜಿಟಲ್ ಅರೆಸ್ಟ್
ಮುಂಬೈ: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಜನರನ್ನು ಬೆದರಿಕೆ ಅವರಿಂದ ಹಣ ಲೂಟಿ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದು, ಈ ಸಂಬಂಧ ಗುಜರಾತ್‌ನಲ್ಲಿ ಆರು ಮಂದಿಯನ್ನು ಕೆಲವು ದಿನಗಳ ಹಿಂದೆ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ವೃದ್ಧ ಉದ್ಯಮಿ ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನೂ ಇಲ್ಲಿ ಬಂಧಿಸಲಾಗಿದೆ. ‘ಮುಂಬೈನ ಹಿರಿಯ ನಾಗರಿಕರೊಬ್ಬರಿಂದ ₹70 ಲಕ್ಷ ಲೂಟಿ ಮಾಡಿದ ಪ್ರಕರಣದ ತನಿಖೆ ವೇಳೆ ಈ ಜಾಲವನ್ನು ಭೇದಿಸಲಾಗಿದೆ. ₹58 ಕೋಟಿ ಲೂಟಿಯ ಹಿಂದೆ ಇದೇ ಜಾಲವೇ ಇದೆ’ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಮಾಹಿತಿ ನೀಡಿದರು.
‘ಚೀನಾ ಹಾಗೂ ಕಾಂಬೋಡಿಯಾದಲ್ಲಿರುವ ಲೂಟಿಕೋರರೊಂದಿಗೆ ಗುಜರಾತ್‌ನಲ್ಲಿನ ಜಾಲದ ಪ್ರಮುಖ ಆರೋಪಿ ಯುವರಾಜ್ ಸಂಪರ್ಕ ಹೊಂದಿದ್ದರು. ಬೇನಾಮಿ ಬ್ಯಾಂಕ್ ಖಾತೆ ತೆರೆಯುವುದು ಮತ್ತು ಈ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಕುರಿತು ಅವರಿಂದ ಈತ ಮಾಹಿತಿ ಪಡೆದುಕೊಳ್ಳುತ್ತಿದ್ದರು’ ಎಂದು ವಿವರಿಸಿದರು.
‘ಈ ಜಾಲದ ಸದಸ್ಯರು ತಮ್ಮನ್ನು ತಾವು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಎಂದಷ್ಟೇ ಅಲ್ಲದೇ, ನವದೆಹಲಿ ಎಟಿಎಸ್‌ನ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹಿರಿಯ ಅಧಿಕಾರಿ ಎಂದೂ ಹೇಳಿಕೊಳ್ಳುತ್ತಾರೆ. ಎನ್‌ಐಎ ಮುಖ್ಯಸ್ಥ ಎಂದೂ ಹಿರಿಯ ಐಪಿಎಸ್ ಅಧಿಕಾರಿ ಸದಾನಂದ ದಾತೆ ಅಂತಲೂ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ’ ಎಂದರು.
‘ಯುವರಾಜ್ ಅವರು ಮೊದಲಿಗೆ ಎರಡು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ. ಬಳಿಕ, 138 ಖಾತೆಗಳಿಗೆ ಅವುಗಳನ್ನು ವರ್ಗಾಯಿಸುತ್ತಾರೆ. ಬಳಿಕ, ಈ ಹಣವನ್ನು ಕ್ರಿಪ್ಟೊ ಕರೆನ್ಸಿಯಾಗಿ ಮತ್ತು ಅಮೆರಿಕd ಡಾಲರ್‌ಗೆ ಪರಿವರ್ತಿಸುತ್ತಾರೆ’ ಎಂದು ವಿವರಿಸಿದರು.
ಶೇ 3ರಷ್ಟು ಕಮಿಷನ್: ‘ಕಳೆದ ಮೂರು ವರ್ಷಗಳಿಂದ ಯುವರಾಜ್ ಸೈಬರ್ ಅಪರಾಧಗಳಲ್ಲಿ ತೊಡಗಿಕೊಂಡಿದ್ದರು. ಈ ಅಪರಾಧಗಳಿಗಾಗಿ ಅವರು ಶೇ 3ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ. ಕಮಿಷನ್ ಹಣವನ್ನು ಸ್ಥಳೀಯ ಉದ್ಯಮಿಗಳು ಹಾಗೂ ವರ್ತಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಹೇಳಿತ್ತಿದ್ದರು’ ಎಂದರು.
31 ಪ್ರಕರಣ
‘ಬೆಂಗಳೂರು, ಮುಂಬೈ, ಭೋಪಾಲ್, ಉತ್ತರ ಪ್ರದೇಶ, ಜಾರ್ಖಂಡ್, ತೆಲಂಗಾಣ, ಗುಜರಾತ್ ಸೇರಿದಂತೆ ವಿವಿಧೆಡೆ ಸುಮಾರು 31 ಪ್ರಕರಣಗಳಲ್ಲಿ ಯುವರಾಜ್ ಭಾಗಿಯಾಗಿದ್ದರು. ಇಲ್ಲಿಯವರೆಗೆ 15 ಬ್ಯಾಂಕ್ ಖಾತೆಗಳನ್ನು ಮತ್ತು ₹ 10.5 ಲಕ್ಷವನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.