ADVERTISEMENT

ಶಾಸಕರ ಅನರ್ಹತೆ: ಸ್ಪೀಕರ್‌ಗೆ ಅಧಿಕಾರ ಬೇಡ, ಮರು ಚಿಂತನೆಗೆ 'ಸುಪ್ರೀಂ' ಸಲಹೆ

ಪಿಟಿಐ
Published 21 ಜನವರಿ 2020, 19:52 IST
Last Updated 21 ಜನವರಿ 2020, 19:52 IST
   

ನವದೆಹಲಿ: ‘ವಿಧಾನಸಭೆಯ ಸ್ಪೀಕರ್‌ ಸಹ ಒಂದು ರಾಜಕೀಯ ಪಕ್ಷದ ಸದಸ್ಯರಾಗಿರುತ್ತಾರೆ. ಆದ್ದರಿಂದ ಶಾಸಕರ ಅನರ್ಹತೆ ಕುರಿತ ಅರ್ಜಿಗಳನ್ನು ಇತ್ಯರ್ಥಗೊಳಿಸುವ ಅವರ ಅಧಿಕಾರದ ಬಗ್ಗೆ ಸಂಸತ್ತು ಮರುಚಿಂತನೆ ನಡೆಸಬೇಕು’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸಲಹೆ ನೀಡಿದೆ.

‘ಶಾಸಕರ ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಯ ಹೊಣೆಯನ್ನು ಲೋಕಸಭೆ ಅಥವಾ ಆಯಾ ವಿಧಾನಸಭೆಯ ಸ್ಪೀಕರ್‌ಗೆ ನೀಡುವ ಬದಲು, ನಿವೃತ್ತ ನ್ಯಾಯಮೂರ್ತಿ ನೇತೃತ್ವದ ನ್ಯಾಯಮಂಡಳಿ ರಚಿಸುವುದು ಅಥವಾ ಇನ್ಯಾವುದಾದರೂ ಸ್ವತಂತ್ರ ವ್ಯವಸ್ಥೆಯೊಂದನ್ನು ರೂಪಿಸುವುದು ಅಗತ್ಯ. ಇದರಿಂದ ಪ್ರಕರಣಗಳನ್ನು ಶೀಘ್ರ ಮತ್ತು ನಿಷ್ಪಕ್ಷಪಾತವಾಗಿ ಇತ್ಯರ್ಥಗೊಳಿಸಲು ಸಾಧ್ಯ. ಪ್ರಜಾಪ್ರಭುತ್ವವು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ಇಂಥ ವ್ಯವಸ್ಥೆ ರೂಪಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ಮಾಡುವ ಬಗ್ಗೆ ಸಂಸತ್ತು ಗಂಭೀರ ಚಿಂತನೆ ನಡೆಸಬೇಕು’ ಎಂಬ ಸಲಹೆಯನ್ನು ನ್ಯಾಯಮೂರ್ತಿ
ಆರ್‌.ಎಫ್‌. ನರಿಮನ್‌ ನೇತೃತ್ವದ ಪೀಠವು ನೀಡಿದೆ.

ಬಿಜೆಪಿ ಮುಖಂಡ, ಮಣಿಪುರದ ಅರಣ್ಯ ಖಾತೆ ಸಚಿವ ಶ್ಯಾಮ ಕುಮಾರ್‌ ಅವರ ಶಾಸಕತ್ವವನ್ನು ರದ್ದುಪಡಿಸುವಂತೆ ಕೋರಿ ಮಣಿಪುರ ವಿಧಾನಸಭೆಯ ಕಾಂಗ್ರೆಸ್‌ ಮುಖಂಡ ಕೈಶಂ ಮೇಘಚಂದ್ರ ಸಿಂಗ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಕೋರ್ಟ್‌ ಈ ಸೂಚನೆ ನೀಡಿದೆ.

ADVERTISEMENT

ಕರ್ನಾಟಕದ ಉಲ್ಲೇಖ
ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತ ಲಭಿಸದೆ, ಅತಂತ್ರ ಸ್ಥಿತಿ ನಿರ್ಮಾಣವಾದಾಗ ಸ್ಪೀಕರ್‌ ಜವಾಬ್ದಾರಿ ಹೆಚ್ಚಾಗುತ್ತದೆ. ಕರ್ನಾಟಕದಲ್ಲಿ ಈಚೆಗೆ ಇಂಥ ಸ್ಥಿತಿ ನಿರ್ಮಾಣವಾಗಿ, ಅನರ್ಹತೆಯ ಅರ್ಜಿಯ ಇತ್ಯರ್ಥವನ್ನೂ ಸ್ಪೀಕರ್‌ ವಿಳಂಬ ಮಾಡಿದ್ದರು. ಶಾಸಕರ ಅನರ್ಹತೆಯ ಅರ್ಜಿಯನ್ನು ಗರಿಷ್ಠ ಮೂರು ತಿಂಗಳೊಳಗೆ ಇತ್ಯರ್ಥಪಡಿಸಲೇಬೇಕು. ಶಾಸಕರು ಪಕ್ಷವಿರೋಧಿ ಚಟುವಟಿಕೆ ನಡೆಸಿ, 10ನೇ ಪರಿಚ್ಛೇದದ ಅಡಿ ಅನರ್ಹತೆಗೆ ಅರ್ಹರಾಗಿದ್ದಾರೆ ಎಂದಾದರೆ, ಅಂಥ ಶಾಸಕರನ್ನು ಒಂದು ದಿನವೂ ಮುಂದುವರಿಸಲು ಬಿಡಬಾರದು’ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.