ADVERTISEMENT

ಪಂಜಾಬ್‌ ಕಾಂಗ್ರೆಸ್ ಭಿನ್ನಮತಕ್ಕೆ ಮದ್ದಿಲ್ಲ: ರಾವತ್ ಮತ್ತೆ ಹೈಕಮಾಂಡ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:31 IST
Last Updated 30 ಆಗಸ್ಟ್ 2021, 19:31 IST
ನವಜೋತ್ ಸಿಂಗ್ ಸಿಧು ಹಾಗೂ ಅಮರಿಂದರ್ ಸಿಂಗ್
ನವಜೋತ್ ಸಿಂಗ್ ಸಿಧು ಹಾಗೂ ಅಮರಿಂದರ್ ಸಿಂಗ್   

ನವದೆಹಲಿ:ಪಂಜಾಬ್ ಕಾಂಗ್ರೆಸ್‌ ಘಟಕದ ಆಂತರಿಕ ಭಿನ್ನಮತವು, ತನ್ನ ಕೈಗೆ ತಾನೇ ಹಗ್ಗ ಕಟ್ಟಿಕೊಂಡಂತಹ ಸ್ಥಿತಿಗೆಆ ಪಕ್ಷವನ್ನು ತಂದು ನಿಲ್ಲಿಸಿದೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಮುಂಬರುವ 2022ರ ವಿಧಾನಸಭಾ ಚುನಾವಣೆಯ ಕ್ಯಾಪ್ಟನ್ ಎಂದು ಈ ಹಿಂದೆ ಪಕ್ಷ ಘೋಷಿಸಿತ್ತು. ಹೀಗೆ ಹೇಳಿ ಕೆಲವು ದಿನ ಕಳೆಯುವಷ್ಟರಲ್ಲಿ, ಗಾಂಧಿ ಕುಟುಂಬದ (ಸೋನಿಯಾ, ರಾಹುಲ್, ಪ್ರಿಯಾಂಕಾ) ನೇತೃತ್ವದಲ್ಲಿ ಚುನಾವಣೆ ಎದುರಿಸುವು ದಾಗಿ ಭಾನುವಾರ ಪಕ್ಷ ಹೇಳಿದೆ.

ಎರಡೂ ಕಡೆಯಿಂದ ತೀವ್ರ ಒತ್ತಡಕ್ಕೆ ಸಿಲುಕಿರುವಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರು ತಮ್ಮನ್ನು ಪಂಜಾಬ್ ಉಸ್ತುವಾರಿ ಸ್ಥಾನದಿಂದ ಬಿಡುಗಡೆ ಮಾಡಿ ಎಂದು ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡುವ ಮಟ್ಟಕ್ಕೆ ಭಿನ್ನಮತ ದೊಡ್ಡದಾಗಿದೆ. ಉತ್ತರಾಖಂಡದಲ್ಲಿ ಚುನಾವಣಾ ಸಿದ್ಧತೆಗಳ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಅವರು ಮನವರಿಕೆ ಮಾಡಲು ಯತ್ನಿಸಿದ್ದಾರೆ.

‘ಸೋನಿಯಾ, ರಾಹುಲ್, ಪ್ರಿಯಾಂಕಾ ಅವರ ನಾಯಕತ್ವದಲ್ಲಿ ನಾವು ಚು‌ನಾವಣೆ ಎದುರಿಸಲಿದ್ದೇವೆ. ಅವರೇ ನಮ್ಮ ಅಸ್ಮಿತೆ. ಅವರೇ ನಮ್ಮ ನಾಯಕರು’ ಎಂದು ರಾವತ್ ಹೇಳಿದ್ದಾರೆ.

ADVERTISEMENT

‘ನಾವು ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ 2022ರ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ’ ಎಂದು ರಾವತ್ ಅವರು ಕೇವಲ ಐದು ದಿನಗಳ ಹಿಂದೆ, ಅಂದರೆ ಆಗಸ್ಟ್ 25ರಂದು ಹೇಳಿಕೆ ನೀಡಿದ್ದರು. ಆದರೆ ಅಮರಿಂದರ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಹೊರಕ್ಕೆ ಕಳಿಸುವ ಯೋಚನೆಯಲ್ಲಿರುವ ಸಿಧು ಅವರ ಬಣಕ್ಕೆ ರಾವತ್ ಅವರ ಈ ಮಾತು ಸರಿಕಾಣಲಿಲ್ಲ.

ಈ ಮಾತುಗಳು ಭಿನ್ನಮತೀಯರಿಗೆ ಕಿರಿಕಿರಿಯುಂಟು ಮಾಡಿದವು. ‘ನೀವು ನನಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಡದಿದ್ದರೆ, ನಾನು ಸಂಪೂರ್ಣ ಹಾಳುಗೆಡವುತ್ತೇನೆ’ ಎಂದು ಸಿಧು ಕಿಡಿಕಾರಿದ್ದರು.

ತಮ್ಮ ಹೇಳಿಕೆಗೆ ರಾವತ್ತಿದ್ದುಪಡಿ ಮಾಡಿಕೊಂಡರು. ‘ಸೋನಿಯಾ, ರಾಹುಲ್ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಪಕ್ಷ ಅನೇಕ ಪ್ರಮುಖರನ್ನು ಹೊಂದಿದೆ. ಹಾಗೆಯೇ ಸ್ಥಳೀಯ ಮಟ್ಟದಲ್ಲಿ ಅಮರಿಂದರ್ ಸಿಂಗ್, ನವಜೋತ್ ಸಿಂಗ್ ಸಿಧು ಮತ್ತು ಪರ್ಗತ್ ಸಿಂಗ್ ಅವರಂತಹ ಹಲವಾರು ಮುಖಗಳಿವೆ. ಯಾವಾಗ ಮತ್ತು ಏನು ಹೇಳಬೇಕು ಎಂಬುದು ನನಗೆ ತಿಳಿದಿದೆ’ ಎಂದು ಹೇಳಿದರು.

ಗೊಂದಲದ ಗೂಡು
ರಾವತ್ ಅವರ ಈ ಹಿಂದಿನ ಮತ್ತು ಈಗಿನ ಹೇಳಿಕೆಗಳನ್ನು ಗಮನಿಸಿದರೆಪಂಜಾಬ್ ಕಾಂಗ್ರೆಸ್‌ನಲ್ಲಿ ತೀವ್ರ ಭಿನ್ನಮತವಿದೆ ಎಂಬುದು ತಿಳಿಯುತ್ತದೆ. ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಪಕ್ಷ ರಚಿಸಿದ್ದರೂ, ಗೊಂದಲ ಪರಿಹರಿಸಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಅಮರಿಂದರ್ ಅವರ ಆಕ್ಷೇಪದ ನಡುವೆಯೂ ಪಿಸಿಸಿ ಅಧ್ಯಕ್ಷರನ್ನಾಗಿ ಸಿಧು ನೇಮಕಕ್ಕೆ ಸಮಿತಿ ಶಿಫಾರಸು ಮಾಡಿತ್ತು.

ಕ್ಯಾಪ್ಟನ್ ನೇತೃತ್ವದ ಸರ್ಕಾರದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಇದೆ ಎಂಬುದಾಗಿ ಆಂತರಿಕ ವರದಿಗಳು ಹೇಳುತ್ತವೆ. ಸದ್ಯಕ್ಕೆ ಅಮರಿಂದರ್ ನಾಯಕತ್ವ ಒಪ್ಪಲುಸಿಧು ಮುಕ್ತ ಮನಸ್ಸು ಹೊಂದಿದ್ದಾರೆ. ಆದರೆ, ನಾಯಕತ್ವ ಕುರಿತಂತೆ ದೀರ್ಘಾವಧಿಯ ಕಾರ್ಯತಂತ್ರ ರೂಪಿಸಲು ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ.

2017ರ ಚುನಾವಣೆಯ ಆರಂಭದಲ್ಲಿ ಅಮರಿಂದರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿರಲಿಲ್ಲವಾದರೂ, ಪ್ರಚಾರದ ಕೊನೆಯ ಹಂತದಲ್ಲಿ ಪ್ರಕಟಣೆ ಹೊರಡಿಸಿತ್ತು. ಆದರೆ ಈ ಬಾರಿ ಅಮರಿಂದರ್ ಮತ್ತು ಸಿಧು ಅವರ ಮಧ್ಯೆ ಒಬ್ಬರನ್ನು ಹೆಸರಿಸಿದರೆ, ಪಕ್ಷ ಇಬ್ಭಾಗವಾಗುವ ಆತಂಕ ಇದೆ. ಪಕ್ಷದ ಈ ಭಿನ್ನಮತವು ಪ್ರತಿಪಕ್ಷಗಳ ಹಾದಿಯನ್ನು ಸುಗಮಗೊಳಿಸುವ ಭೀತಿಯೂ ಇದೆ.

*
ಅಮರಿಂದರ್ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಯಾವಾಗ ನಿರ್ಧರಿಸಲಾಯಿತುಎಂಬುದನ್ನು ರಾವತ್ ಸ್ಪಷ್ಟಪಡಿಸಬೇಕು
-ಪರ್ಗತ್ ಸಿಂಗ್, ಸಿಧು ಬಣದ ಮುಖಂಡ

*
ಪಕ್ಷವು ಮುಖ್ಯಮಂತ್ರಿ ಅಮರಿಂದರ್, ಪಿಸಿಸಿ ಮುಖ್ಯಸ್ಥ ಸಿಧು ಮತ್ತು ಪರ್ಗತ್ ಸಿಂಗ್ ಮೇಲೆ ಭಾರಿ ವಿಶ್ವಾಸ ಇರಿಸಿದೆ.
-ಹರೀಶ್ ರಾವತ್, ಪಂಜಾಬ್ ಉಸ್ತುವಾರಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.