
ನವದೆಹಲಿ: ದೀಪಾವಳಿ ಹಬ್ಬದ ವೇಳೆ ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಹಸಿರು ಪಟಾಕಿ ಮಾರಾಟ ಮಾಡಲು ಮತ್ತು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ.
ಹಬ್ಬಗಳ ಸಮಯದಲ್ಲಿ ಹಸಿರು ಪಟಾಕಿ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಗಳು ಸುಪ್ರೀಂ ಕೊರ್ಟ್‌ಗೆ ಮನವಿ ಮಾಡಿದ್ದವು.
ಸಿಜೆಐ ಬಿ.ಆರ್.ಗವಾಯಿ ಹಾಗೂ ನ್ಯಾ. ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಹಸಿರು ಪಟಾಕಿ ಮೇಲಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ.
‘ದೀಪಾವಳಿ ಪ್ರಯುಕ್ತ ಅ.18 ರಿಂದ ಅ.21ರವರೆಗೆ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದೆ. ಈ ವೇಳೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ಮಟ್ಟವನ್ನು ಪರಿಶೀಲಿಸಿ, ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ಸುಪ್ರೀಂ ಕೊರ್ಟ್ ತಿಳಿಸಿದೆ.
ದೆಹಲಿಯೊಳಗೆ ಅಕ್ರಮವಾಗಿ ಪಟಾಕಿಗಳನ್ನು ತರಲಾಗುತ್ತಿದೆ. ಹಸಿರು ಪಟಾಕಿಗಳಿಗಿಂತ ಅವು ಪರಿಸರಕ್ಕೆ ಹೆಚ್ಚಿನ ಹಾನಿ ಮಾಡುತ್ತವೆ. ಪರಿಸರಕ್ಕೆ ಹಾನಿಯಾಗದ ರೀತಿಯ ಕ್ರಮವನ್ನು ನಾವು ಕೈಗೊಳ್ಳುತ್ತಿದ್ದೇವೆ ಎಂದು ಸಿಜೆಐ ಬಿ.ಆರ್.ಗವಾಯಿ ತಿಳಿಸಿದ್ದಾರೆ.
ದೆಹಲಿಯ ಹೊರಗಡೆ ತಯಾರಾಗುವ ಪಟಾಕಿಗಳನ್ನು ಇಲ್ಲಿ ಮಾರುವಂತಿಲ್ಲ. ಒಂದು ವೇಳೆ ಇಂತಹ ಪ್ರಕರಣಗಳು ಪತ್ತೆಯಾದರೆ, ಮಾರಾಟಗಾರರ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಪೀಠ ತಿಳಿಸಿದೆ.
ಮಕ್ಕಳು ಎರಡು ದಿನ ಸಂಭ್ರಮಿಸಲಿ. ದೀಪಾವಳಿ, ಗುರು ನಾನಕ್ ಜಯಂತಿ ಮತ್ತು ಕ್ರಿಸ್‌ಮಸ್‌ಗೆ ಮಾತ್ರವೇ ಪಟಾಕಿ ಸಿಡಿಸಲಾಗುತ್ತದೆ. ನನ್ನೊಳಗಿನ ಮಗುವು ನಿಮ್ಮೊಳಗಿನ (ಸಿಜೆಐ) ಮಗುವಿನ ಮನವೊಲಿಸಲು ಯತ್ನಿಸುತ್ತದೆ. ಕೆಲವು ದಿನಗಳ ಮಟ್ಟಿಗೆ ಸಮಯದ ಯಾವುದೇ ನಿರ್ಬಂಧ ಬೇಡತುಷಾರ್ ಮೆಹ್ತಾ, ಸಾಲಿಸಿಟರಲ್ ಜನರಲ್ (ಅ.10ರಂದು ಮಂಡಿಸಿದ್ದ ವಾದ)
ಷರತ್ತುಗಳಾವುವು?
ಹಸಿರು ಪಟಾಕಿ ಮಾರಾಟ ಯಾವಾಗ: ಅ.18ರಿಂದ 21ರವರೆಗೆ
ಪಟಾಕಿ ಬಳಕೆ ಸಮಯ: ಬೆಳಿಗ್ಗೆ 6ರಿಂದ 7ರವರೆಗೆ, ರಾತ್ರಿ 8ರಿಂದ 10ರವರೆಗೆ (ದೀಪಾವಳಿ ಹಬ್ಬದ ಹಿಂದಿನ ದಿನ, ದೀಪಾವಳಿ ಹಬ್ಬದ ದಿನ– ಎರಡು ದಿನಕ್ಕೆ ಮಾತ್ರವೇ ಅವಕಾಶ)
ಆನ್‌ಲೈನ್‌ನಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶವಿಲ್ಲ
ಎಸ್‌ಪಿಯೊಂದಿಗೆ ಚರ್ಚಿಸಿ, ಜಿಲ್ಲಾಧಿಕಾರಿ ಗುರುತಿಸಿದ ಸ್ಥಳಗಳಲ್ಲಿ ಮಾತ್ರವೇ ಮಾರಾಟ ನಡೆಯಬೇಕು. ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯಲ್ಲಿ (ನೀರಿ) ನೋಂದಾಯಿತ ಹಸಿರು ಪಟಾಕಿ ತಯಾರಿಕಾ ಕಂಪನಿಗಳು ಮಾತ್ರವೇ ತಯಾರಿಕೆ ನಡೆಸಬೇಕು. ಪೆಟ್ರೊಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯಿಂದ (ಪಿಇಎಸ್‌ಒ) ಪರವಾನಗಿ ಪಡೆದ ಮಾರಾಟಗಾರರು ಮಾತ್ರವೇ ಮಾರಾಟ ಮಾಡಬೇಕು
ಮಾರಾಟದ ಸ್ಥಳಗಳಲ್ಲಿ ಪೊಲೀಸರ ತಂಡವು ಗಸ್ತು ತಿರುಗುತ್ತಲೇ ಇರಬೇಕು. ಈ ತಂಡದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೂ ಇರಬೇಕು. ಕ್ಯೂಆರ್ ಕೋಡ್ ಇರುವ ಹಸಿರು ಪಟಾಕಿಗಳು ಮಾತ್ರವೇ ಮಾರಾಟವಾಗುತ್ತಿವೆಯೇ ಎಂಬುದನ್ನು ಇವರು
ಪರಿಶೀಲಿಸುತ್ತಲೇ ಇರಬೇಕು
ನೋಂದಾಯಿಸಿಕೊಳ್ಳದ ತಯಾರಿಕಾ ಕಂಪನಿಗಳ ಮತ್ತು ಪರವಾನಗಿ ಇಲ್ಲದ ಮಾರಾಟಗಾರರ ಹಸಿರು ಪಟಾಕಿಗಳು ಜನರ ಕೈ ಸೇರದಂತೆ ಗಸ್ತು ತಂಡವು ನೋಡಿಕೊಳ್ಳಬೇಕು. ಇಂಥ ಪಟಾಕಿಗಳು ಕಂಡುಬಂದರೆ, ತಕ್ಷಣವೇ ವಶಕ್ಕೆ ಪಡೆಯಬೇಕು
ನಿಯಮ ಉಲ್ಲಂಘಿಸುವ ತಯಾರಿಕಾ ಕಂಪನಿಗಳಿಗೆ ನೋಟಿಸ್ ನೀಡಿ ಅವರ ಪರವಾನಗಿಯನ್ನು ರದ್ದು ಮಾಡಲಾಗುವುದು
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಸಮಾಲೋಚನೆಯೊಂದಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಎನ್‌ಸಿಆರ್ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕದ ಮೇಲ್ವಿಚಾರಣೆ ನಡೆಸಬೇಕು. ಅ.14ರಿಂದ ಆರಂಭಗೊಂಡು ಅ.25ರವರೆಗೆ ಪ್ರತೀ ದಿನ ಪರಿಶೀಲನೆ ನಡೆಸಬೇಕು. ಬಳಿಕ ಈ ಬಗ್ಗೆ ನಮಗೆ ವರದಿ ಸಲ್ಲಿಸಬೇಕು. ಪಟಾಕಿಯನ್ನು ಹೆಚ್ಚು ಸಿಡಿಸಿದ ಸ್ಥಳಗಳಲ್ಲಿನ ಮಣ್ಣು, ಮರಳು ಮತ್ತು ನೀರಿನ ಮಾದರಿಗಳನ್ನು ಮಂಡಳಿಯ ಪ್ರಾದೇಶಿಕ ಅಧಿಕಾರಿಗಳು ಸಂಗ್ರಹಿಸಬೇಕು. ಇವುಗಳ ಪರೀಕ್ಷೆ ನಡೆಸಬೇಕು
ಸಾಂಪ್ರದಾಯಿಕ ಪಟಾಕಿಗಳ ಹೋಲಿಕೆಯಲ್ಲಿ ಹಸಿರು ಪಟಾಕಿಗಳು 20%ರಷ್ಟು ಮಾಲಿನ್ಯಕಾರಕ ಕಣಗಳು ಗಾಳಿ ಸೇರುವುದನ್ನು ತಗ್ಗಿಸುತ್ತವೆ. ಜೊತೆಗೆ, ಸಾಂಪ್ರದಾಯಿಕ ಪಟಾಕಿಗಳಿಗಿಂತ 10%ರಷ್ಟು ಹೊಗೆ ಪಸರಿಸುವಿಕೆ ತಗ್ಗುತ್ತದೆ
‘ನಿಷೇಧ: ಉಪಯೋಗವಾಗಿದೆಯೇ?’
‘ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಿದ ಮೇಲೆ ಹೆಚ್ಚು ಹೊಗೆಯುಗುಳುವ ಸಾಂಪ್ರದಾಯಿಕ ಪಟಾಕಿಗಳ ಕಳ್ಳಸಾಗಣೆಯು ವಿಪರೀತ ಏರಿಕೆಯಾಗಿದೆ. ಇದರಿಂದ ಪರಿಸರಕ್ಕೆ ಹೆಚ್ಚು ಮಾರಕವೇ ಆಗಿದೆ. ಆದ್ದರಿಂದ, ನಾವು ಹೆಚ್ಚು ಸಮತೋಲಿತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ’ ಎಂದು ಸಿಜೆಐ ಗವಾಯಿ ತಮ್ಮ ಆದೇಶದಲ್ಲಿ ಹೇಳಿದರು.
‘ಎನ್‌ಸಿಆರ್ ಪ್ರದೇಶಗಳಲ್ಲಿ ಪಟಾಕಿ ನಿಷೇಧಿಸಿದ ಬಳಿಕವೂ ಇಲ್ಲಿನ ವಾಯು ಮಾಲಿನ್ಯವು ನಿಯಂತ್ರಣಕ್ಕೆ ಬಂದಿಲ್ಲ. ಕೋವಿಡ್ ಕಾಲದಲ್ಲಿ ಮಾತ್ರವೇ ವಾಯು ಮಾಲಿನ್ಯವು ನಿಯಂತ್ರಣದಲ್ಲಿತ್ತು. ಯಾಕೆಂದರೆ, ಈ ಕಾಲದಲ್ಲಿ ಕಾರ್ಖಾನೆಗಳು ಮುಚ್ಚಿದ್ದವು ಮತ್ತು ವಾಹನಗಳ ಸಂಚಾರ ಇರಲಿಲ್ಲ’ ಎಂದು ದತ್ತಾಂಶಗಳನ್ನು ಗಮನಿಸಿ ಪೀಠ ಅಭಿಪ್ರಾಯಪಟ್ಟಿತು.
ಬಿಜೆಪಿ–ಎಎಪಿ ಜಟಾಪಟಿ
ದೆಹಲಿಯಲ್ಲಿ ಸರ್ಕಾರ ಬದಲಾದ ಬಳಿಕ, ಹಿಂದೂ ಹಬ್ಬಗಳ ಮೇಲೆ ನಿರ್ಬಂಧ ಹೇರುವುದು ನಿಂತಿದೆ. ದೀಪಾವಳಿ ಆಚರಿಸುವ ಹಕ್ಕನ್ನು ರಕ್ಷಿಸಲು ಎಎಪಿ ಸರ್ಕಾರ ಬಯಸಿರಲಿಲ್ಲ. ನಾವು ಜನರನ್ನು ಪ್ರತಿನಿಧಿಸುತ್ತೇವೆ. ಹಸಿರು ಪಟಾಕಿಯೊಂದಿಗೆ ಈಗ ದೀಪಾವಳಿಯನ್ನು ಸಾಂಪ್ರದಾಯಿಕವಾಗಿಯೇ ಆಚರಿಸಬಹುದು
–ಕಪಿಲ್ ಮಿಶ್ರಾ, ದೆಹಲಿಯ ಕಲೆ ಮತ್ತು ಸಂಸ್ಕೃತಿ ಸಚಿವ
––––
ನಾವು ಮಾಲಿನ್ಯವನ್ನು ನಿಯಂತ್ರಿಸಲು ಯತ್ನಿಸಿದ್ದೆವು. ದೀಪಾವಳಿಗೆ ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನ್ಯಾಯಾಲಯ ವಿಧಿಸಿದ ನಿಯಮಗಳನ್ನು ದೆಹಲಿ ಸರ್ಕಾರ ಪಾಲಿಸುತ್ತದೆ ಎಂದು ನಂಬಿದ್ದೇವೆ
–ಗೋಪಾಲ್ ರಾಯ್, ಎಎಪಿ ನಾಯಕ
‘ಪ್ರಾಯೋಗಿಕವೇನೋ ಹೌದು. ಆದರೆ...’
ಹಬ್ಬ ಆಚರಣೆ ಜನರ ಹಕ್ಕು. ಆದರೆ, ದೆಹಲಿಯದ್ದು ವರ್ಷವಿಡೀ ಇರುವ ವಾಯು ಮಾಲಿನ್ಯದ ಸಮಸ್ಯೆ. ವಾಯು ಗುಣಮಟ್ಟ ನಿರ್ವಹಣೆ ಆಯೋಗದಲ್ಲಿ ಸದ್ಯ ಶೇ 35ರಷ್ಟು ಸಿಬ್ಬಂದಿ ಕೊರತೆ ಇದೆ. ದೆಹಲಿ ವಾಯು ನಿಯಂತ್ರಣ ಸಮಿತಿ ಮತ್ತು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲೂ ಇದೇ ಸಮಸ್ಯೆ ಇದೆ. ಇದಕ್ಕಾಗಿಯೇ ಮಾಲಿನ್ಯದ ಕುರಿತು ತಳಮಟ್ಟದಲ್ಲಿ ಜಾಗೃತಿ ಕಡಿಮೆ ಇದೆ
–ಅಮಿತ್ ಗುಪ್ತಾ, ಪರಿಸರ ಕಾರ್ಯಕರ್ತ
–––––
ಹಸಿರು ಪಟಾಕಿಗಳು ಶೇ 30ರಷ್ಟು ವಾಯು ಮಾಲಿನ್ಯವನ್ನು ತಗ್ಗಿಸುತ್ತವೆ ನಿಜ. ಆದರೆ, ಈ ಕ್ರಮದಿಂದ ಹೆಚ್ಚು ಉಪಕಾರವೇನೂ ಆಗುವುದಿಲ್ಲ. ಯಾಕೆಂದರೆ, ದೀಪಾವಳಿ ಹಬ್ಬದಲ್ಲಿ ಇದರ ಬಳಿಕೆಯ ಪ್ರಮಾಣವೇ, ಇದರ ಪ್ರಯೋಜನವನ್ನು ತಿಂದುಹಾಕಿ ಬಿಡುತ್ತದೆ. ಇದರಿಂದ, ಮಾಲಿನ್ಯ ಹೆಚ್ಚೇ ಆಗುತ್ತದೆ
–ಸುನಿಲ್ ದಹಿಯಾ, ಪರಿಸರವಾದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.